ರಾಮನಗರ: ಚನ್ನಪಟ್ಟಣ ತಾಲೂಕಿನ ಕುಣಿಗಲ್ ಮುಖ್ಯ ರಸ್ತೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಕುಂತೂರುದೊಡ್ಡಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕುಂತೂರುದೊಡ್ಡಿ ಗ್ರಾಮದ ಸಮೀಪದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಳೆದ ಮೂರು ತಿಂಗಳಿನಿಂದ ಅರ್ಧ ಕಾಮಗಾರಿ ನಡೆಸಿದ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಧೂಳು ಗ್ರಾಮಸ್ಥರನ್ನು ಕಂಗೆಡಿಸಿದೆ. ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ಬಾರಿ ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಇನ್ನು ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ವಾಹನಗಳ ಓಡಾಟದಿಂದ ಧೂಳು, ಮಣ್ಣು ಮನೆಗಳಿಗೆ ನುಗ್ಗುತ್ತಿದೆ. ಮನೆಯಲ್ಲಿನ ಬಟ್ಟೆಗಳು ಧೂಳಿನಿಂದ ಆವೃತವಾಗ್ತಿವೆ. ಆಹಾರ, ನೀರು ಎಲ್ಲವೂ ಸಹ ಧೂಳುಮಯವಾಗಿ ತಿನ್ನಲು ಸಹ ಸಾಧ್ಯವಾಗ್ತಿಲ್ಲ. ಕೂಲಿನಾಲಿ ಮಾಡಿ ಆಹಾರ ವಸ್ತುಗಳನ್ನು ಕೂಡಿಟ್ಟುಕೊಂಡ್ರೆ ಧೂಳಿನಿಂದ ಎಲ್ಲವೂ ಹಾಳಾಗ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಟೆಂಡರ್ ಪಡೆದಿರುವ ಗುತ್ತಿಗೆದಾರನ ಲೈಸನ್ಸ್ ರದ್ದುಪಡಿಸಬೇಕು. ಅಲ್ಲದೇ ಕೂಡಲೇ ಕಾಮಗಾರಿ ಶುರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.