ರಾಮನಗರ: ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟೊ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯ ಉದ್ಯೋಗಿಯೊಬ್ಬರು ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
46 ವಯಸ್ಸಿನ ಅವರು ಬೆಂಗಳೂರಿನ ನಿವಾಸಿಯಾಗಿದ್ದು, ಹಲವು ದಿನದ ಹಿಂದೆ ಸೋಂಕಿಗೆ ತುತ್ತಾಗಿ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಕೊನೆಯುಸಿರು ಎಳೆದಿದ್ದಾರೆ. ಅವರ ತಂದೆಯೂ ಇದೇ ತಿಂಗಳ 2ರಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಟಿಕೆಎಂ ಆಡಳಿತ ಮಂಡಳಿ ಸಂತಾಪ ಸೂಚಿಸಿದೆ. ‘ಮೃತ ವ್ಯಕ್ತಿ ಕೊನೆಯದಾಗಿ ಜೂನ್ 23ರಂದು ಕೆಲಸಕ್ಕೆ ಹಾಜರಾಗಿದ್ದರು. ಕಳೆದ 15 ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ಸಿಬ್ಬಂದಿ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದೆ. ಕಾರ್ಖಾನೆ ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಮಂಗಳವಾರ ಕಂಪನಿ ಎಂದಿನಂತೆ ಕಾರ್ಯ ನಿರ್ವಹಿಸಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸೋಂಕಿತರ ಸಂಖ್ಯೆ ಏರಿಕೆ
ಬಿಡದಿಯಲ್ಲಿರುವ ಮತ್ತೊಂದು ಪ್ರಮುಖ ಕಂಪನಿಯಾದ ಬಾಷ್ ಕಂಪನಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಸೋಮವಾರ ಸಂಜೆ ವೇಳೆಗೆ ಕಂಪನಿಯ 60ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಸೋಂಕಿತರಲ್ಲಿ ಬಹುತೇಕರು ಬೆಂಗಳೂರಿನವರೇ ಆಗಿದ್ದಾರೆ. 182 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.