ರಾಮನಗರ : ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ಮರ್ಯಾದೆಗೆ ಅಂಜಿ ಕೌಸಲ್ಯ ಮತ್ತು ಲೋಕೇಶ್ ದಂಪತಿ ಕೆಲ ದಿನಗಳ ಹಿಂದಷ್ಟೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಆ ಪ್ರಕರಣ ಮತ್ತಷ್ಟು ತಿರುವು ಪಡೆದಿದೆ. ಈಗ ಆ ಗ್ರಾಮದ ಬೀದಿ-ಬೀದಿಗಳು ಬಿಕೋ ಎನ್ನುತ್ತಿವೆ.
ದಂಪತಿ ಆತ್ಮಹತ್ಯೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪ್ರಕರಣದ ಆರೋಪಿಯಾದ ತ್ಯಾಗರಾಜ್ (ತ್ಯಾಗೀಶ್ )ಎಂಬುವನ ಮನೆಗೆ ಬೆಂಕಿ ಹಚ್ಚಿದ್ದರು. ಕಾರು, ಬೈಕ್ ಸೇರಿದಂತೆ ಆಸ್ತಿ-ಪಾಸ್ತಿಗಳನ್ನು ಸುಟ್ಟು ಹಾಕಿದ್ದರು. ಈ ಪ್ರಕರಣ ಸಂಬಂಧ ಆರೋಪಿಯ ಬಂಧನವಾಗಿದೆ. ಜೊತೆಗೆ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ಮೇಲೂ ಪ್ರಕರಣ ದಾಖಲಾಗಿತ್ತು. ಹೀಗಾಗಿ ಬಂಧನ ಭೀತಿಯಿಂದ ಎಲ್ಲರೂ ಜಾನುವಾರು ಸಹಿತ ಊರು ಬಿಟ್ಟಿದ್ದಾರೆ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಗ್ರಾಮದಲ್ಲಿ ಇದೀಗ ಖಾಲಿ-ಖಾಲಿ ರಸ್ತೆ, ಬೀಗ ಜಡಿದ ಮನೆಗಳು ಮಾತ್ರ.
ಪ್ರಕರಣದ ಹಿನ್ನೆಲೆಯೇನು...!
ಸಾದರಹಳ್ಳಿ ಗ್ರಾಮದ ತ್ಯಾಗರಾಜು ಎಂಬ ವ್ಯಕ್ತಿ ತನ್ನ ಜತೆ ಆತ್ಮಹತ್ಯೆ ಮಾಡಿಕೊಂಡಿರುವ ಕೌಸಲ್ಯ ಇದ್ದ ಫೋಟೋವನ್ನು ಆಕೆಯ ಪತಿ ಲೋಕೇಶ್‌ಗೆ ಕಳುಹಿಸಿದ್ದಾನೆ. ಹೀಗಾಗಿ ದಪಂತಿಯ ನಡುವೆ ಗಲಾಟೆ ನಡೆದು, ಮನನೊಂದ ದಂಪತಿ ನೇಣಿಗೆ ಶರಣಾಗಿದ್ದಾರೆ. ಬಳಿಕ ವಶೀಕರಣ ಮಾಡಿ ಕೌಸಲ್ಯಳನ್ನು ಆತ ಕರೆದೊಯ್ದಿದ್ದ ಎಂದು ಆರೋಪಿಸಲಾಗಿತ್ತು. ಅಲ್ಲದೆ ಅವರ ಸಾವಿನಿಂದ ರೊಚ್ಚಿಗೆದ್ದ ಗ್ರಾಮಸ್ಥರು, ರಾತ್ರೋರಾತ್ರಿ ತ್ಯಾಗರಾಜ್ ಮನೆಗೆ ಬೆಂಕಿ ಇಟ್ಟಿದ್ದರು. ಈ ವೇಳೆ ಅಲ್ಲೇ ಪಕ್ಕದಲ್ಲೇ ಇದ್ದ ಕಾರು, ಬೈಕ್, ಟ್ರ್ಯಾಕ್ಟರ್, ಮರಗಳು ಸಹ ಹೊತ್ತಿ ಉರಿದಿದ್ದವು. ಅಂದಾಜು 40 ಲಕ್ಷ ರೂ.ಗಳಿಗೂ ಹೆಚ್ಚಿನ ನಷ್ಟ ಉಂಟಾಗಿತ್ತು. ಪ್ರಕರಣದ ಆರೋಪಿ ತ್ಯಾಗರಾಜ್ನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. ಇದೇ ವೇಳೆ ಆರೋಪಿ ಪ್ರತಿ ದೂರು ನೀಡಿದ್ದು, ತನ್ನ ಆಸ್ತಿಗಳನ್ನು ಸುಟ್ಟುಹಾಕಿದ ಹಿನ್ನೆಲೆಯಲ್ಲಿ ಗ್ರಾಮದ 50 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದ. ಹೀಗಾಗಿ ಪೊಲೀಸರು ಪದೇಪದೆ ಗ್ರಾಮಸ್ಥರನ್ನು ವಿಚಾರಣೆ ನಡೆಸುವುದರಿಂದ ಬೇಸತ್ತು ಊರನ್ನೇ ಖಾಲಿ ಮಾಡಿದ್ದಾರೆ.
ತನಿಖೆ ಚುರುಕಾಗಿಸಿದ ಪೊಲೀಸರು...
ಈ ಹಿಂದೆಯೂ ಗ್ರಾಮದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಊರಿನ ಗ್ರಾಮಸ್ಥರೆಲ್ಲರೂ ಅಹೋರಾತ್ರಿ ಪ್ರತಿಭಟನೆ ಕೂಡಾ ನಡೆಸಿದ್ದರು. ಗ್ರಾಮಕ್ಕೆ ನಿತ್ಯ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದರಿಂದ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿತ್ತು. ಇದರಿಂದ ಭಯಭೀತರಾಗಿ ರಾತ್ರೋರಾತ್ರಿ ಊರು ಖಾಲಿ ಮಾಡಿದ್ದಾರೆ.
ರಾಸುಗಳನ್ನು ಮಾರಾಟ ಮಾಡಿ, ಮನೆಗೆ ಬೀಗ ಜಡಿದು ಕೃಷಿ ಚಟುವಟಿಕೆಗಳಿಗೆ ತಿಲಾಂಜಲಿ ಹಾಕಿದ್ದಾರೆ. ಯಾವಾಗ ಬೇಕಾದರೂ ಪೊಲೀಸರ ಅತಿಥಿಯಾಗಬಹುದೆಂಬ ಭಯದಲ್ಲೇ ಗ್ರಾಮಸ್ಥರು ಊರು ತೊರೆದಿದ್ದಾರೆ. ಹೀಗಾಗಿ ಇಡೀ ಗ್ರಾಮಕ್ಕೆ ಗ್ರಾಮವೇ ಖಾಲಿ ಖಾಲಿ. ಕೆಲವರು ಮಾತ್ರ ಅಪರೂಪಕ್ಕೊಮ್ಮೆ ಬಾಗಿಲು ತೆರೆದಿದ್ದರೆ ಹೆಚ್ಚು ಎನ್ನುವಂತಾಗಿದೆ.
ತಮ್ಮ ಮಕ್ಕಳನ್ನು ಶಾಲೆ ಬಿಡಿಸಿರುವ ಗ್ರಾಮಸ್ಥರು, ದೂರದ ಸಂಬಂಧಿಕರ ಮನೆಗಳಲ್ಲಿ ಬಿಟ್ಟಿದ್ದಾರೆ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೂ ಕತ್ತರಿ ಬಿದ್ದಿದೆ. ಇನ್ನು ಕೆಲವರ ಮಕ್ಕಳೂ ಸಂಬಂಧಿಕರ ಮನೆಗಳಿಂದ ಶಾಲೆಗೆ ಹೋಗುತ್ತಿವೆ. ರಾಜೀ ಸಂಧಾನಕ್ಕೆ ನಿರಂತರ ಪ್ರಯತ್ನ ನಡೆಯುತ್ತಲೇ ಇದೆ. ಆದರೆ, ಗ್ರಾಮದಲ್ಲಿ ಮಾತ್ರ ನೀರವ ಮೌನ. ಮನೆಯ ಮುಂದೆ ಕಸದ ರಾಶಿ ನಿರ್ಮಾಣಗೊಂಡಿದ್ದು, ಎಲ್ಲ ಮನೆಯ ಬಾಗಿಲುಗಳೂ ಸಹ ಬೀಗ ಹಾಕಿಕೊಂಡಿವೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ತುಂಬಿದೂರಲ್ಲಿ ಪೊಲೀಸರು ಮಾತ್ರವೇ ದರ್ಶನ ನೀಡುತ್ತಿದ್ದಾರೆ.