ರಾಮನಗರ: ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ, ಪೂರ್ಣ ಬಹುಮತದ ಗುರಿಯೊಂದಿಗೆ ಅಖಾಡಕ್ಕೆ ಇಳಿದಿರುವ ಅವರು, ಸಭೆ, ಸಮಾರಂಭ, ರಥ ಯಾತ್ರೆಗಳ ಮೂಲಕ ಮತದಾರರ ಮನ ಗೆಲ್ಲುಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕ್ಷೇತ್ರದ ರಾಜಕೀಯ ಬೆಳವಣಿಗೆ ಬಗ್ಗೆ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನ ಹಮ್ಮಿಕೊಳ್ಳಲಾಗಿತ್ತು.
ಈ ನಡುವೆ ಸ್ವಕ್ಷೇತ್ರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಅವರು, ಶತಾಯ-ಗತಾಯ ಇಲ್ಲಿಂದಲೇ ಗೆದ್ದು ಮುಖ್ಯಮಂತ್ರಿ ಹುದ್ದೆ ಆಲಂಕರಿಸಬೇಕೆಂದು ಮನಗಂಡು ಬಿಡದಿಯ ತಮ್ಮ ತೋಟದ ಮನೆಯಲ್ಲಿ ಚುನಾವಣಾ ರಣತಂತ್ರ ಹೆಣೆಯುವ ಮೂಲಕ ಚನ್ನಪಟ್ಟಣ ತಾಲೂಕು ಜೆಡಿಎಸ್ ಅನ್ನು ಬಲಗೊಳಿಸಿದ್ದಾರೆ. ಸ್ವಾಭಿಮಾನ ಸಂಕಲ್ಪ ನಡಿಗೆ ಮೂಲಕ ತಾಲೂಕಿನಲ್ಲಿ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಕೋಟೆಯನ್ನು ಛಿದ್ರ ಮಾಡಲು ಹೆಚ್ಡಿಕೆ ರಣತಂತ್ರ ರೂಪಿಸಿದ್ದಾರೆ.
ನಾನೇ ಮುಂದಿನ ಮುಖ್ಯಮಂತ್ರಿ: ಬಿಡದಿಯ ತಮ್ಮ ತೋಟದ ಮನೆಯಲ್ಲಿ ಚನ್ನಪಟ್ಟಣ ತಾಲೂಕಿನ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಈ ಕ್ಷೇತ್ರದ ಕಾರ್ಯಕರ್ತರು ಮತ್ತು ಜನತೆಯ ಪ್ರೀತಿ ವಿಶ್ವಾಸದೊಂದಿಗೆ ಚನ್ನಪಟ್ಟಣದಿಂದ ಗೆದ್ದು ಈ ರಾಜ್ಯದ ಮುಖ್ಯಮಂತ್ರಿಯಾಗಿ ಜೆಡಿಎಸ್ ಸರ್ಕಾರ ರಚಿಸುವುದು ಶತಸಿದ್ಧ ಎಂದು ಹೆಚ್ಡಿಕೆ ವಿಶ್ವಾಸ ವ್ಯಕ್ತಪಡಿಸಿದರು. ದೇವರು ಮತ್ತು ಜನರ ಆಶೀರ್ವಾದದಿಂದ ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಬಹುಮತ ದೊರೆಯಲಿದ್ದು, ಮತ್ತೊಮ್ಮೆ ನಾನೇ ಮುಖ್ಯಮಂತ್ರಿ ಆಗುತ್ತೇನೆ. ರಾಷ್ಟ್ರೀಯ ಪಕ್ಷಗಳನ್ನು ಎದುರಿಸುವ ಸಾಮರ್ಥ್ಯ ನನ್ನಲ್ಲಿದೆ. ನೀವು ಯಾರಿಗೂ ಅಂಜದೇ ಚನ್ನಪಟ್ಟಣ ತಾಲೂಕಿನಲ್ಲಿ ಚುನಾವಣೆ ಪ್ರಚಾರ ಕೈಗೊಳ್ಳಿ ಎಂದು ಕುಮಾರಸ್ವಾಮಿ ತಾಲೂಕು ಜೆಡಿಎಸ್ ಘಟಕಕ್ಕೆ ಅಭಯ ನೀಡಿದರು.
ಪಕ್ಷ ತ್ಯಜಿಸಿದವರು ಬೆಂಬಲಿಸಲಿದ್ದಾರೆ: ಅನ್ಯರು ಮುಂದಿನ ಸೋಲಿನ ಬಗ್ಗೆ ಭಯ ಪಟ್ಟು ಮುಖಂಡರನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಹೊರ ಹೋದವರ ಬಗ್ಗೆ ಚಿಂತಿಸಬೇಡಿ. ಪಕ್ಷ ತ್ಯಜಿಸಿದವರು ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಲಿದ್ದಾರೆ. ಜೆಡಿಎಸ್ ತ್ಯಜಿಸಿದ ಮುಖಂಡರು ದೈಹಿಕವಾಗಿ ಅನ್ಯ ಪಕ್ಷದಲ್ಲಿದ್ದರು, ಮಾನಸಿಕವಾಗಿ ಜೆಡಿಎಸ್ ಪಕ್ಷದ ಗೆಲುವಿಗೆ ಶ್ರಮಿಸಲಿದ್ದಾರೆ. ಶಕ್ತಿವಂತ ಕಾರ್ಯಕರ್ತರ ಪಡೆಯೇ ನನ್ನನ್ನು ಚುನಾಯಿಸಲಿದೆ ಎಂದು ಕುಮಾರಸ್ವಾಮಿ ತಾಲೂಕು ಜೆಡಿಎಸ್ ಘಟಕಕ್ಕೆ ಅಭಯ ನೀಡಿದರು.
ತಾಲೂಕಿನಲ್ಲಿ ನಾಲ್ಕು ದಿನ ಪ್ರವಾಸ: ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ 123 ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಬೇಕಿದೆ. ಇದಕ್ಕಾಗಿ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ಕ್ಷೇತ್ರದಲ್ಲಿ ನಿಖಿಲ್ ಮತ್ತು ನೀವೆಲ್ಲರೂ ಪ್ರತಿ ಹಳ್ಳಿಗೂ ಭೇಟಿ ನೀಡಿ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾಲೂಕಿಗೆ ನೀಡಿದ್ದ 1500 ಕೋಟಿ ರೂ. ಅನುದಾನದ ವಿವರ ಜನತೆ ಮುಂದಿಟ್ಟು ಮತಯಾಚಿಸಿ. ಗೆಲುವು ನಮ್ಮದೇ ಎಂದು ಕುಮಾರಸ್ವಾಮಿ ಅವರು ಕಾರ್ಯಕರ್ತರನ್ನು ಹುರಿದುಂಬಿಸಿದರು.
ನಾಲ್ಕು ದಿನಗಳನ್ನು ಕ್ಷೇತ್ರಕ್ಕಾಗಿ ಮೀಸಲಿಡುತ್ತೇನೆ. ನೀವು ಸೂಚಿಸಿದ ಕಡೆ ಬಂದು ಪ್ರಚಾರ ಮಾಡುತ್ತೇನೆ. ಯಾರ ಮನೆಗೆ ಕರೆದುಕೊಂಡು ಹೋಗುತ್ತೀರೋ ನಾನು ಅಲ್ಲಿಗೆ ಬರುತ್ತೇನೆ. ತಾಲ್ಲೂಕಿನ ಜನತೆ ನನ್ನ ಜನಪರ ಕಾರ್ಯಗಳನ್ನು ಮನಗಂಡಿದ್ದಾರೆ. ನಾಡಿನ ಹಿತ ಮತ್ತು ಸಮಗ್ರ ಅಭಿವೃದ್ಧಿಗಾಗಿ ನನ್ನನ್ನು ಚುನಾಯಿಸಲಿದ್ದಾರೆ. ನೀವು ಚುನಾವಣೆ ಕೆಲಸ-ಕಾರ್ಯಗಳಲ್ಲಿ ಸಕ್ರೀಯರಾಗಿ ಎಂದು ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿದರು.
ನಂಜನಗೂಡು ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಹಾಕುವುದಿಲ್ಲ: ದಿವಂಗತ ಮಾಜಿ ಸಂಸದ ದೃವನಾರಾಯಣ ನಿಧನದ ಬೆನ್ನಲ್ಲೆ ಅವರ ಧರ್ಮಪತ್ನಿ ಕೂಡ ಶುಕ್ರವಾರ ನಿಧನರಾದ ಹಿನ್ನೆಲೆಯಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಗೆ ನಮ್ಮ ಪಕ್ಷದಿಂದ ಯಾವುದೇ ಅಭ್ಯರ್ಥಿಯನ್ನ ಕಣಕ್ಕೆ ಇಳಿಸುವುದಿಲ್ಲ. ತಂದೆ ತಾಯಿಯನ್ನ ಕಳೆದುಕೊಂಡು ಅನಾಥರಾಗಿರುವ ದರ್ಶನ್ ಎದುರು ಯಾವುದೇ ಸ್ಪರ್ಧೆ ಹಾಕುವುದಿಲ್ಲ. ಈ ಭಾರಿ ದರ್ಶನ ದೃವನಾರಾಯಣ್ ಅವರಿಗೆ ನಮ್ಮ ಬಾಹ್ಯ ಬೆಂಬಲ ಇರಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ತಲುಪಿದ ರಾಜ್ಯ ನಾಯಕರು: ನಡ್ಡಾ ನಿವಾಸದಲ್ಲಿ ಮಹತ್ವದ ಸಭೆ..!