ಬೆಂಗಳೂರು: ರಾಮನಗರಕ್ಕೆ ಕೊರೊನಾ ಹಬ್ಬಿಸಲು ಸರ್ಕಾರ ಮಾಡಿರುವ ಪಿತೂರಿ ಇದು ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪಾದರಾಯನಪುರ ಸೋಂಕಿತ ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಿರುವುದು ಆಘಾತಕಾರಿ ವಿಷಯ. ಕಾರಾಗೃಹದಲ್ಲಿ ಸುಮಾರು 120 ಕೈದಿಗಳು ಇದ್ದರು. ಅವರೆನ್ನೆಲ್ಲಾ ಏಕಾಏಕಿ ಶಿಫ್ಟ್ ಮಾಡಿ, ಈ ಆರೋಪಿಗಳನ್ನು ಕರೆ ತಂದಿದ್ದಾರೆ. ಅವರನ್ನು ಇಲ್ಲಿಗೆ ಶಿಫ್ಟ್ ಮಾಡುವ ತೀರ್ಮಾನವನ್ನು ಕೈ ಬಿಡುವಂತೆ ಕೋರಿದ್ದೆ. ಆದರೂ ಅದಕ್ಕೆ ಕಿವಿಗೊಡಲಿಲ್ಲ. ಆರೋಪಿಗಳನ್ನು ಟೆಸ್ಟ್ ಮಾಡಿಸದೆಯೇ ಕರೆತರಲಾಗಿದೆ ಎಂದು ಕಿಡಿ ಕಾರಿದರು.
ಡಿಸಿಎಂ ಅಶ್ವತ್ಥ್ ನಾರಾಯಣ್ ಒಬ್ಬ ವೈದ್ಯರಾಗಿದ್ದು, ಆರೋಪಿಗಳನ್ನು ರಾಮನಗರಕ್ಕೆ ಟೆಸ್ಟ್ ಮಾಡಿಸದೇ ಶಿಫ್ಟ್ ಮಾಡಿಸಿದ್ದು ಎಷ್ಟು ಸರಿ?. ಆ ಮೂಲಕ ಗ್ರೀನ್ ಝೋನ್ ಇದ್ದ ರಾಮನಗರಕ್ಕೆ ಕೊರೊನಾ ಸೋಂಕು ಅಂಟಿಸಿಲು ಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಮನಗರದಿಂದ ಕೂಡಲೇ ಪಾದರಾಯನಪುರ ಘಟನೆ ಆರೋಪಿಗಳನ್ನು ಸ್ಥಳಾಂತರಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಜೊತೆಗೆ ರಾಮನಗರದಲ್ಲಿ ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.