ರಾಮನಗರ: ಡಿ.ಕೆ.ಶಿವಕುಮಾರ್ ಕೆಲವು ವಿಷಯಗಳಲ್ಲಿ ತಪ್ಪು ಮಾಡಿದ್ದೇನೆಂದು ಸ್ವತಃ ಅವರೇ ಒಪ್ಪಿಕೊಂಡಿರುವಾಗ ಅವರ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಬಿಡದಿಯ ಖಾಸಗಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂವಿಧಾನದ 370ನೇ ವಿಧಿ ರದ್ಧತಿ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಬಂಧನವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾನು ಕೆಲವು ವಿಷಯಗಳಲ್ಲಿ ತಪ್ಪು ಮಾಡಿದ್ದೀನಿ ಎಂದು ಡಿಕೆಶಿ ಅವರೇ ತನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ಪರಮೇಶ್ವರ್ ಅವರೇ ಹೇಳಿದ್ದಾರೆ. ಅವರೇ ತಮ್ಮ ತಪ್ಪನ್ನು ಒಪ್ಪಿಕೊಂಡಿರುವಾಗ ಅದನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಾರೆ ಎಂಬುದು ಆರೋಪ ಅಷ್ಟೆ ಎಂದರು.
ಡಿಕೆಶಿ ಬಂಧನ ವಿಚಾರದಿಂದ ನಮ್ಮ ದಾರಿ ಸುಲಭವಾಯಿತೆಂದು ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವರಿಗೆ ಒಳ ಒಳಗೆ ಸಂತೋಷವಾಗಿದೆ. ಆದರೆ ಮೇಲ್ನೋಟಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿತು ಎನ್ನುತ್ತಾರಲ್ಲ ಹಾಗೆ ಒಳಗೆ ಆಗುತ್ತಿರುವ ಸಂತೋಷವನ್ನು ಒಳಗೆ ಇಟ್ಟುಕೊಂಡು ಬಿಜೆಪಿ ಮೇಲೆ ರಾಜಕಾರಣ ಮಾಡಲು ಬಳಕೆ ಮಾಡುತ್ತಿದ್ದಾರೆ ಎಂದು ಕುಟುಕಿದರು.