ರಾಮನಗರ: ಸ್ಥಳೀಯ ಸಂಸ್ಥೆ ಚುನಾವಣೆ ಸೇರಿ ಯಾವುದೇ ವಿಷಯಗಳಲ್ಲೂ ಬಿಜೆಪಿ-ಜೆಡಿಎಸ್ ನಡುವೆ ಒಳ ಒಪ್ಪಂದ ಆಗಿಲ್ಲ. ಕೇವಲ ಊಹಾಪೋಹದ ಮಾತುಗಳು ಹರಿದಾಡುತ್ತಿದೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದರು.
ರಾಮನಗರದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳಿಗೆ, ಮುಖ್ಯವಾಗಿ ಕಾಂಗ್ರೆಸ್‌ಗೆ ಒಳ್ಳೆಯದು ಮಾತಾಡಿ ಅಭ್ಯಾಸವಿಲ್ಲ. ಹಳೆ ಮೈಸೂರು ಪ್ರಾಂತ್ಯ ಜಿಲ್ಲೆ ಸೇರಿ ಯಾವುದೇ ಭಾಗದಲ್ಲಿ ಬಿಜೆಪಿ- ಜೆಡಿಎಸ್ ನಡುವೆ ಹೊಂದಾಣಿಕೆ ಇಲ್ಲ. ಜೆಡಿಎಸ್ ನಮಗೆ ವಿರೋಧ ಪಕ್ಷ. ಒಳೊಪ್ಪಂದಗಳು ಮಾಡಿಕೊಂಡಿದ್ರೆ ಅದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮಾತ್ರ ಎಂದರು.
ಮಂಡ್ಯ ಮೈಶುಗರ್ ಕಾರ್ಖಾನೆ ಉಳಿಯಬೇಕು:
ಮಂಡ್ಯ ಜಿಲ್ಲೆಯ ಮೈಶುಗರ್ ಕಾರ್ಖಾನೆ ಆರಂಭದ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದು ತಪ್ಪಿಲ್ಲ. ಕಾರ್ಖಾನೆ ಪ್ರಾರಂಭಿಸಬೇಕೆಂಬುದು ಮಂಡ್ಯ ಭಾಗದ ಜನರ ಬಹುದಿನಗಳ ಬಯಕೆ. ಆ ನಿಟ್ಟಿನಲ್ಲಿ ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ಇದೇ ವೇಳೆ ತಿಳಿಸಿದರು.
ಮೇಕೆದಾಟು ಯೋಜನೆ ಆದಷ್ಟು ಬೇಗ ಚಾಲನೆ:
ಮೇಕೆದಾಟು ಯೋಜನೆ ಆದಷ್ಟು ಬೇಗ ಚಾಲನೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಈ ಯೋಜನೆಯಿಂದ ಸರಕಾರ ಹಿಂದೆ ಸರಿಯುವುದಿಲ್ಲ. ಹಿಂದೆ ಜಲಸಂಪನ್ಮೂಲ ಖಾತೆ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು ಕೇಂದ್ರದಿಂದ ಎಲ್ಲ ಒಪ್ಪಿಗೆಗಳನ್ನು ಪಡೆದುಕೊಂಡಿದ್ದರು. ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಇವೆ. ಮುಂಗಡ ಪತ್ರದಲ್ಲೂ ಯೋಜನೆಯನ್ನು ಪ್ರಸ್ತಾಪ ಮಾಡಲಾಗುವುದು ಎಂದರು.
ತಮಿಳುನಾಡು ಮುಖ್ಯಮಂತ್ರಿಗಳ ಸಹಕಾರ ಪಡೆಯಲು ಸರಕಾರ ಪ್ರಯತ್ನಿಸಿದೆ. ನಮ್ಮ ಪಾಲು ನೀರನ್ನು ಮಾತ್ರ ನಾವು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ತಮಿಳುನಾಡು ಪಾಳಿನ ನೀರನ್ನು ಯಾವ ಕಾರಣಕ್ಕೂ ರಾಜ್ಯ ತಡೆಯುವುದಿಲ್ಲ ಎಂದು ಇದೇ ವೇಳೆ ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದರು.