ರಾಮನಗರ: ತಾನೇ ಪಾಠ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದ ಶಿಕ್ಷಕನನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಮನಗರದ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕನಾಗಿರುವ ಸತೀಶ್ ಕುಮಾರ್ (36) ಬಂಧಿತ ವ್ಯಕ್ತಿ. ಈತ 9ನೇ ತರಗತಿಗೆ ಪಾಠ ಮಾಡುತ್ತಿದ್ದ. ಅದೇ ತರಗತಿಯಲ್ಲಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿ, ಪ್ರೇಮದ ಹೆಸರಿನಲ್ಲಿ ಪುಸಲಾಯಿಸಿ ಕರೆದುಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಚಾಕುವಿನಿಂದ ಬೆದರಿಸಿ, ಒಡಹುಟ್ಟಿದ ಸಹೋದರಿಯರ ಮೇಲೆ ಅತ್ಯಾಚಾರ
ಶಿಕ್ಷಕ ಸತೀಶ್ ಮೂಲತಃ ಕನಕಪುರದ ನಿವಾಸಿಯಾಗಿದ್ದು, ಪತ್ನಿ ಹಾರೋಹಳ್ಳಿಯಲ್ಲಿ ನೆಲೆಸಿದ್ದಾರೆ. ಇವರಿಬ್ಬರ ದಾಂಪತ್ಯ ಅಷ್ಟೊಂದು ಚೆನ್ನಾಗಿಲ್ಲ ಎನ್ನಲಾಗಿದ್ದು, ಈ ನಡುವೆ ಆರೋಪಿ ತಾನು ಪಾಠ ಮಾಡುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಮೇ. 8 ರಂದು ಮುಂಜಾನೆ 3 ಗಂಟೆಯ ಹೊತ್ತಿಗೆ ಆಕೆಯನ್ನು ಮನೆಯಿಂದ ಅಪರಿಚಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿನಿಯ ಮಾವ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ, ಆರೋಪಿಯನ್ನು ಬಂಧಿಸಿರುವ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.