ರಾಮನಗರ: ರಾಜ್ಯಾದ್ಯಂತ ರೈತರು ಕೃಷಿಗೆ ನೀರು ಹಾಯಿಸಲು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದರೆ, ಜಿಲ್ಲೆಯ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ರೈತರು ಮಾತ್ರ ಇದ್ಯಾವುದೇ ಸಮಸ್ಯೆ ಇಲ್ಲದೇ, ಸೂರ್ಯ ರೈತ ಯೋಜನೆಯಿಂದ ವಿದ್ಯುತ್ ತಯಾರು ಮಾಡುತ್ತಿದ್ದಾರೆ.
ಏನಿದು ಸೂರ್ಯ ರೈತ ಯೋಜನೆ: ಸಮ್ಮಿಶ್ರ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ವೇಳೆ ಡಿ.ಕೆ ಶಿವಕುಮಾರ್ ಜಾರಿಗೆ ತಂದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯೇ 'ಸೂರ್ಯ ರೈತ ಯೋಜನೆ'. ಪ್ರಾರಂಭಿಕ ಹಂತವಾಗಿ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ.
ಹಾರೋಬೆಲೆ ಗ್ರಾಮದ ಎಲ್ಲ ರೈತರಿಗೂ ಅವರವರ ಜಮೀನಿನಲ್ಲಿ ಉಚಿತವಾಗಿ ಸೋಲಾರ್ ಅಳವಡಿಸಿ ಕೊಡುವುದು. ರೈತರ ಕೊಳವೆ ಬಾವಿಯ ಪಂಪ್ಸೆಟ್ಗೆ ಸೋಲಾರ್ನಿಂದ ವಿದ್ಯುತ್ ಸಂಪರ್ಕ ಕೊಡಿಸಿ, ಬೆಳಗ್ಗೆ ಸೂರ್ಯ ಉದಯ ಆದಾಗಿನಿಂದ, ಸಂಜೆ ಸೂರ್ಯಾಸ್ತವಾಗುವವರೆಗೆ ಎಷ್ಟು ಬೇಕಾದರೂ ನೀರು ಬಳಸಿಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ. ಸರ್ಕಾರದ ಯೋಜನೆಯಂತೆ, ಗ್ರಾಮದಲ್ಲಿ ಯೋಜನೆ ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದಿದೆ.
ರೈತರು ಸೋಲಾರ್ನಿಂದ ಉತ್ಪತಿಯಾಗುವ ವಿದ್ಯುತ್ ಅನ್ನು ಕೃಷಿ ಕಾರ್ಯಕ್ಕೆ ಬಳಸಿಕೊಂಡ ಬಳಿಕ, ಇತರ ಕಾರ್ಯಗಳಿಗೆ ಉಪಯೋಗಿಸಬಹುದು. ಇನ್ನು, ತಮ್ಮ ಜಮೀನಿನಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಕೂಡ ಮಾಡಬಹುದು. ಇದರಿಂದಲೂ ರೈತರಿಗೆ ಲಾಭವಾಗುತ್ತದೆ.
ರೈತ ಸಮುದಾಯದ ಅನುಕೂಲಕ್ಕಾಗಿಯೇ ಈ ದೊಡ್ಡ ಯೋಜನೆ ರೂಪಿಸಲಾಗಿತ್ತು. ರೈತರಿಗೆ 24 ಗಂಟೆ ನಿರಂತರ ವಿದ್ಯುತ್ ನೀಡಿ ಆರ್ಥಿಕ ಸುಧಾರಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಸೂರ್ಯ ರೈತ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಿಂದ ರೈತರು ಆರೋಗ್ಯಕರ ವ್ಯವಸಾಯ ಮಾಡಲು ಅನುಕೂಲವಾಗುತ್ತಿದೆ. ಪಟ್ಟಣ ಬಿಟ್ಟು ಬಹಳಷ್ಟು ಜನರು ಹಾರೋಬೆಲೆ ಗ್ರಾಮಕ್ಕೆ ಬಂದು ವ್ಯವಸಾಯ ಮಾಡುತ್ತಿದ್ದಾರೆ.