ರಾಮನಗರ : ಸಾವಿನಲ್ಲೂ ತಂದೆ-ಮಗ ಒಂದಾಗಿರುವ ಮನಕಲಕುವ ಘಟನೆ ಜಿಲ್ಲೆಯ ಮಾಗಡಿ ಪಟ್ಟಣದ ತಿರುಮಲೆಯಲ್ಲಿ ನಡೆದಿದೆ.
ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ. ಕೊರೊನಾದಿಂದಲೇ ಮಗ ಸತ್ತಿರಬಹುದೆಂಬ ಭಯದಿಂದ ತಂದೆ ಕೂಡ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಜಿಲ್ಲೆಯ ಮಾಗಡಿ ಪಟ್ಟಣದ ತಿರುಮಲೆ ನಿವಾಸಿ ವೇಣುಗೋಪಾಲ್ (40) ಹಾಗೂ ತಂದೆ ಶಂಕರಪ್ಪ (68) ಮೃತಪಟ್ಟವರು. ವೇಣುಗೋಪಾಲ್ ಅವರನ್ನು ಭಾನುವಾರ ರಾತ್ರಿ ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ರಾಜಾರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿನ ಕೊರೊನಾ ಆಂಟಿಜೆನ್ ಟೆಸ್ಟ್‌ನಲ್ಲಿ ವೇಣುಗೋಪಾಲ್ ವರದಿ ನೆಗೆಟಿವ್ ಬಂದಿದೆ.
ಮಗ ಸತ್ತ ಎಂಬ ವಿಚಾರ ತಿಳಿಯುತ್ತಿದ್ದಂತೆ ತಂದೆಯೂ ಕೂಡ ಹೃದಯಾಘಾತಕ್ಕೆ ಒಳಗಾಗಿ ಪಟ್ಟಣದ ಮೈತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವೇಣುಗೋಪಾಲ್, ತಮಗೂ ಕೊರೊನಾ ಬಂದಿರುವ ಬಗ್ಗೆ ಬಹಳ ಭಯಪಟ್ಟಿದ್ದು, ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಇದೇ ವಿಚಾರದಿಂದಲೇ ತಂದೆಯೂ ಮಗನ ಸಾವನ್ನು ಅರಗಿಸಿಕೊಳ್ಳಲಾರದೆ ಮೃತಪಟ್ಟಿದ್ದು, ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.