ರಾಮನಗರ: ಚನ್ನಪಟ್ಟಣ ನಗರದಲ್ಲಿರುವ ಶೆಟ್ಟಿಹಳ್ಳಿ ಕೆರೆಯ ಸಾಕಷ್ಟು ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಮಂಗಳವಾರಪೇಟೆಯ ಸರ್ವೆ ನಂ.13ಕ್ಕೆ ಸೇರಿದ ಶೆಟ್ಟಿಹಳ್ಳಿ ಕೆರೆ, ಸುಮಾರು 20.14 ಎಕರೆಯಷ್ಟಿದೆ. ಅದರಲ್ಲಿ 1.28 ಎಕರೆ ಜಾಗವನ್ನು 26 ಜನರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆಪಾದನೆ ಇದೆ.
ಕೆರೆಗೆ ಅಂಟಿಕೊಂಡಿರುವ ಇಂದಿರಾ ಕಾಟೇಜ್ ಬಡಾವಣೆಯ ಜನರು ನಿಧಾನವಾಗಿ ಕೆರೆ ಜಾಗ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಾವು ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಆ ಬಳಿಕ ಅಧಿಕಾರಿಗಳು ಕೆರೆ ಜಾಗ ಸರ್ವೆ ಮಾಡಿ ಅಕ್ರಮವಾಗಿ ನಿರ್ಮಾಣವಾದ ಮನೆಗಳ ತೆರವಿಗೆ ಮುಂದಾಗಿದ್ದರು. ಅಷ್ಟರಲ್ಲಿ ಕೆಲವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದರು. ಹೀಗಾಗಿ, ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡ ಮತ್ತು ಮನೆಗಳನ್ನ ತೆರವು ಮಾಡುವ ಕಾರ್ಯ ಸ್ಥಗಿತವಾಗಿತ್ತು. ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಸಹ ಕೆರೆಯ ಬಗ್ಗೆ ಗಮನಕೊಡುತ್ತಿಲ್ಲ ಎಂಬ ಆರೋಪಗಳಿವೆ.
ಈಗಾಗಲೆ ಶೆಟ್ಟಿಹಳ್ಳಿ ಕೆರೆಯ ಅರ್ಧದಷ್ಟು ಜಾಗ ಅಕ್ರಮವಾಗಿ ಒತ್ತುವರಿಯಾಗಿದ್ದು, ಮನೆ, ಕುರಿ, ಮೇಕೆ ಶೆಡ್ ನಿರ್ಮಾಣ ಮಾಡಲಾಗಿದೆ. ಆದರೂ ಸಹ ಚನ್ನಪಟ್ಟಣ ತಾಲೂಕು ಆಡಳಿತ ಇದರತ್ತ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.