ರಾಮನಗರ: ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಆಟವಾಡುವ ವೇಳೆ ರೋಲರ್ ಕ್ರಷರ್ ಮಗುಚಿ ಐವರು ಗಾಯಗೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಿಡದಿ ಬಳಿಯಿರುವ ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಮುಂಜಾಗೃತಾ ಕ್ರಮಗಳನ್ನು ಎಚ್ಚರಿಕೆಯಿಂದ ಕೈಗೊಳ್ಳದ ಹಿನ್ನೆಲೆಯಲ್ಲಿ ಯಂತ್ರ ತಿರುಗುವ ವೇಳೆ ಜನರಿದ್ದ ರೋಲರ್ ಮಗುಚಿ ಬಿದ್ದಿದೆ. ಈ ವೇಳೆ ನಾಲ್ಕೈದು ನಿಮಿಷಗಳ ಕಾಲ ಯಂತ್ರದಡಿ ಸಿಲುಕಿದ್ದ ಯುವಕರು ಚೀರಾಟ ನಡೆಸಿದ್ದು, ಐವರಿಗೂ ಗಾಯಗಳಾಗಿವೆ.
ರಾಜಿ ಸಂಧಾನ:
ಸುರಕ್ಷತಾ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿರುವ ಆಡಳಿತ ಮಂಡಳಿ ಯಂತ್ರದಡಿ ಸಿಲುಕಿದ ಗಾಯಾಳುಗಳಿಗೆ ಚಿಕಿತ್ಸೆ ನೀಡಿ ರಾಜಿ ಸಂಧಾನ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವಂಡರ್ ಲಾನಲ್ಲಿ ನಡೆದಿರುವ ಘಟನೆ ಹೊರಬರದಂತೆ ಕಾಯ್ದುಕೊಳ್ಳುವ ಪ್ರಯತ್ನವನ್ನು ಆಡಳಿತ ಮಂಡಳಿ ನಡೆಸಿದ್ದು, ಇದಕ್ಕಾಗಿ ರಾಜಿ ಸಂಧಾನಕ್ಕೆ ಬಿಡದಿ ಪೊಲೀಸರನ್ನು ಬಳಸಿಕೊಂಡಿದ್ದಾರೆ ಎನ್ನಲಾಗಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಯುವಕರು ಯಂತ್ರದಡಿ ಸಿಲುಕಿ ನರಳಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಪುಷ್ಠಿ ಬಂದಂತಾಗಿದೆ.