ರಾಮನಗರ: ಚನ್ನಪಟ್ಟಣ ತಾಲೂಕಿನ ವಿವಿಧೆಡೆಯಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಬುಕ್ಕಿಗಳ ಮೇಲೆ ರಾಮನಗರದ ಸೈಬರ್, ಎಕನಾಮಿಕ್ ಹಾಗೂ ನಾರ್ಕೋಟಿಕ್ಸ್ ಪೊಲೀಸರ ತಂಡ ದಾಳಿ ನಡೆಸಿ ಆರು ಮಂದಿ ಆರೋಪಿಗಳ ಪೈಕಿ ನಾಲ್ವರನ್ನ ಬಂಧಿಸಿದ್ದಾರೆ.
ಆತ್ಮಾನಂದ್, ಎಂ.ಸಿ.ಮನು, ಎಸ್ ಕೃಷ್ಣಮೂರ್ತಿ, ನಾಗಾರ್ಜುನ ಬಂಧಿತ ಆರೋಪಿಗಳಾಗಿದ್ದು, ಉಳಿದಂತೆ ಸಂದೀಪ್ ಹಾಗೂ ಗೋಪಾಲ್ ಇಬ್ಬರು ಬುಕ್ಕಿಗಳು ನಾಪತ್ತೆಯಾಗಿದ್ದಾರೆ. ಬಂಧಿತರಿಂದ 10 ಲಕ್ಷದ 98 ಸಾವಿರ ನಗದು, ಎರಡು ಕಾರು, ಸೋನಿ ಟಿವಿ, ಮೊಬೈಲ್ ಸೇರಿದಂತೆ ಎಟಿಎಂ ಕಾರ್ಡ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಿನ್ನೆ ಬೆಂಗಳೂರು ಹಾಗೂ ಕೆಕೆಆರ್ ತಂಡ ನಡುವೆ ಐಪಿಎಲ್ ಕ್ರಿಕೆಟ್ ಇತ್ತು. ಪಂದ್ಯ ತೀವ್ರ ಕುತೂಹಲದಿಂದ ಕೂಡಿತ್ತು. ಪಂದ್ಯದ ವೇಳೆ ಬೆಟ್ಟಿಂಗ್ ನಡೆಯುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡಿದ್ದ ಸೈಬರ್ ಪೊಲೀಸರು ತಂಡ ರಚನೆ ಮಾಡಿಕೊಂಡು ಚನ್ನಪಟ್ಟಣ ತಾಲೂಕಿನ ಹೊಡಿಕೆ ಹೊಸಹಳ್ಳಿ, ಮಳೂರುಪಟ್ಟಣ, ಸೇರಿದಂತೆ ನಗರ ಪ್ರದೇಶಗಳಲ್ಲಿ ಏಕಾಏಕಿ ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದ ಸಂದರ್ಭದಲ್ಲಿ ನಾಲ್ವರು ಬುಕ್ಕಿಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಬಂಧಿತ ಆರೋಪಿಗಳನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.