ರಾಮನಗರ: ಪ್ರತಿ ಗ್ರಾಮದಲ್ಲೂ ಕೋವಿಡ್ ನಿಯಂತ್ರಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮನ್ವಯವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಸೂಚಿಸಿದರು.
ಇಂದು ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ವರ್ಚುಯಲ್ ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಬೇಕು. ನೆಗಡಿ, ಕೆಮ್ಮು, ಜ್ವರ ಮುಂತಾದ ಕೋವಿಡ್ ಲಕ್ಷಣಗಳು ಕಂಡು ಬಂದರೆ ತಕ್ಷಣ ಪರೀಕ್ಷೆಗೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ರೋಗ ಉಲ್ಭಣವಾದ ನಂತರ ಚಿಕಿತ್ಸೆಗೂ ಹೆಚ್ಚಿನ ಸಮಯ ಬೇಕಾಗುತ್ತದೆ ಹಾಗೂ ರೋಗಿಯು ಸಹ ತೊಂದರೆ ಅನುಭವಿಸುತ್ತಾರೆ. ಈ ಬಗ್ಗೆ ಗ್ರಾಮಗಳಲ್ಲಿ ಜನರಿಗೆ ನಿರಂತರವಾಗಿ ತಿಳಿಸುತ್ತಿರಬೇಕು ಎಂದರು.
ಕೋವಿಡ್ ರೋಗ ಹರಡದಂತೆ ತಡೆಯಲು ಗ್ರಾಮೀಣ ಪ್ರದೇಶದಲ್ಲೂ ಜನರಿಗೆ ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಕೆಲವರಿಗೆ ಚಿಕಿತ್ಸೆಗಾಗಿ ಹೋಮ್ ಐಸೋಲೇಷನ್ ಸಹ ಮಾಡಲಾಗಿದೆ. ಅವರು ಮನೆಯಿಂದ ಹೊರಗೆ ಬರುವಂತಿಲ್ಲ. ಅವರಿಗೆ ಬೇಕಿರುವ ಮೆಡಿಕಲ್ ಕಿಟ್ ಸಹ ಒದಗಿಸಲಾಗುತ್ತಿದೆ. ಅವರು ಶೀಘ್ರವಾಗಿ ಗುಣಮುಖರಾಗಲು ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಯಾವುದೇ ರೀತಿಯ ತೊಂದರೆಗಳು ಕಂಡುಬಂದಲ್ಲಿ ತಕ್ಷಣವೇ ಕೋವಿಡ್ ಸಹಾಯವಾಣಿಗೆ ಕರೆ ಮಾಡಿ ತಿಳಿಸುವಂತೆ ಮಾಹಿತಿ ನೀಡಿದರು.
ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕೆಲಸ ಪ್ರಗತಿಯಲ್ಲಿದ್ದು, ತಮ್ಮ ಗ್ರಾಮದಲ್ಲಿ ಲಸಿಕೆ ನೀಡುವ ದಿನಾಂಕವನ್ನು ತಿಳಿದುಕೊಂಡು ಲಸಿಕೆ ಪಡೆದುಕೊಳ್ಳುವಂತೆ ಜನರನ್ನು ಪ್ರೇರೇಪಿಸಿ ಎಂದರು.