ರಾಮನಗರ: ಸ್ವದೇಶಿ ಕಲ್ಪನೆಯ ಭದ್ರಬುನಾದಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೈಮಗ್ಗ ನೇಕಾರಿಕೆ ಇಂದು ಅವನತಿಯತ್ತ ಸಾಗಿದೆ. ಕೈಮಗ್ಗ ಚಾಲನೆ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ ಮಾಲೀಕರು ಇದೀಗ ವಿದ್ಯುತ್ ಚಾಲಿತ ಯಂತ್ರಗಳ ಮೊರೆ ಹೋಗಿದ್ದಾರೆ. ಆದರೂ ಅವರ ಸಂಕಷ್ಟ ಕಡಿಮೆಯಾಗಿಲ್ಲ. ಸರ್ಕಾರ ಕೂಡ ನೇಕಾರರ ಹಾಗೂ ಉದ್ಯಮದ ನೆರವಿಗೆ ಬಂದಿಲ್ಲ ಎಂಬುದು ದುರಾದೃಷ್ಟ ಸಂಗತಿ.
ಇದೀಗ ಕೊರೊನಾದಿಂದ ನೇಕಾರರ ಬದುಕು ಮತ್ತಷ್ಟು ಸಂಕಷ್ಟಕ್ಕೀಡಾಗಿದೆ. ರಾಮನಗರ ಜಿಲ್ಲೆಯಲ್ಲಿ ಸರಿ ಸುಮಾರು ಎರಡು ಸಾವಿರದಷ್ಟು ಇದ್ದ ಕೈ ಮಗ್ಗಗಳು ಇದೀಗ 80- 90 ರಷ್ಟಾಗಿವೆ.
ಮಾಗಡಿಯ ಕುದೂರು ಭಾಗದಲ್ಲಿ 40 ಮಗ್ಗಗಳು ಮಾತ್ರ ಇದ್ದು, ರಾಮನಗರ ಜಿಲ್ಲಾ ಕೇಂದ್ರದಲ್ಲಿ ಒಂದೂ ಇಲ್ಲ. ಕನಕಪುರದಲ್ಲಿ ನಾಲ್ಕೈದಷ್ಟೇ ಇವೆ. ಅವೂ ಕೂಡ ಬಹುತೇಕ ವಿದ್ಯುತ್ ಚಾಲಿತವಾಗಿಬಿಟ್ಟಿವೆ ಎಂದು ಕೈಮಗ್ಗ ಮಾಲೀಕರು ತಿಳಿಸಿದ್ದಾರೆ.
ಗಾಂಧೀಜಿಯವರ ಕನಸಿನಂತೆ ಸ್ಥಳೀಯ ಉದ್ಯಮಗಳು ಹೆಚ್ಚೆಚ್ಚು ಪ್ರಚಲಿತವಾದಂತೆ ಸ್ವದೇಶಿ ಕಲ್ಪನೆ ಗಟ್ಟಿಯಾಗುತ್ತದೆ. ಅದರ ಸಾಲಿನಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕೈಮಗ್ಗ ಇದೀಗ ಅವಸಾನದ ಅಂಚು ತಲುಪಿಬಿಟ್ಟಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಸರ್ಕಾರದ ನಿರ್ಲಕ್ಷ್ಯ.
ಸರ್ಕಾರ ದೊಡ್ಡ ದೊಡ್ಡ ಉದ್ಯಮಿಗಳಿಗೆ ಉತ್ತೇಜನ ನೀಡುವ ನೆಪದಲ್ಲಿ ಸಾಕಷ್ಟು ಮುತುವರ್ಜಿ ವಹಿಸಿ ಸೌಕರ್ಯ ಕಲ್ಪಿಸಿಕೊಟ್ಟು ಸಬ್ಸಿಡಿ ಕೂಡ ನೀಡುತ್ತೆ. ಆದರೆ ಕೈಮಗ್ಗ ನೇಕಾರಿಕೆಗೆ ಬೆಂಬಲಿಸುತ್ತಿಲ್ಲ. ವಾರ್ಷಿಕ ಎರಡು ಸಾವಿರ ಪ್ರೋತ್ಸಾಹ ಧನ ನೀಡೋದು ಬಿಟ್ಟರೆ ಮತ್ಯಾವ ಸೌಲಭ್ಯ ಕೂಡ ಇಲ್ಲಾ ಎಂದು ಕೈಮಗ್ಗ ಕಾರ್ಮಿಕರು ಆರೋಪಿಸಿದ್ದಾರೆ.
ಸರ್ಕಾರ ನೇಕಾರಿಕೆಗೆ ಒತ್ತು ನೀಡಬೇಕು ಕೈಮಗ್ಗದ ಯಂತ್ರ ಖರೀದಿಗೆ ಸಾಲಸೌಲಭ್ಯದ ಜೊತೆಗೆ ಸಬ್ಸಿಡಿ ಕೊಡಬೇಕು ಕಾರ್ಮಿಕರನ್ನ ಅಸಂಘಟಿತ ಕಾರ್ಮಿಕರ ಸಾಲಿಗೆ ಸೇರಿಸಿ ಸೌಲಭ್ಯಗಳನ್ನ ನೀಡಬೇಕು ಆಗ ಉದ್ಯಮ ಸ್ಥಿರವಾಗಲು ಸಾಧ್ಯವಾಗುತ್ತದೆ ಎಂದು ಎಲ್ ಆರ್. ಸಿಲ್ಕ್ ಸ್ಯಾರೀಸ್ ಮಾಲೀಕ ರಂಗನಾಥ್ ಹೇಳಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ವಿದ್ಯುತ್ ಚಾಲಿತ ಸೇರಿದಂತೆ ನೂರರ ಗಡಿ ದಾಟದ ನೇಯ್ಗೆ ಉದ್ಯಮಕ್ಕೆ ಸರ್ಕಾರ ಇನ್ನಾದರೂ ಬೆಂಬಲ ನೀಡುತ್ತದ ಎಂಬುದನ್ನು ಕಾದುನೋಡಬೇಕಿದೆ.