ರಾಮನಗರ : ಕೊರೊನಾ ವೈರಸ್ ಅನೇಕ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದಂತೂ ನಿಜ. ಅದರ ಸಾಲಿನಲ್ಲಿ ಗಣೇಶ ತಯಾರಕರೂ ಕೂಡ ಹೊರತಾಗಿಲ್ಲ. ಪ್ರತಿ ವರ್ಷ ಗಣೇಶ ಹಬ್ಬದಲ್ಲಿ ಮಣ್ಣಿನ ಗಣಪತಿಗಳನ್ನು ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಕಲಾವಿದರ ಬದುಕು ಕೂಡ ದುಸ್ಥರವಾಗಿದೆ.
ಕೊರೊನಾ ವೈರಸ್ ರಾಜ್ಯಾದಂತ ಹಬ್ಬುತ್ತಿರುವ ಹಿನ್ನೆಲೆ ಈ ಬಾರಿ ಸಾರ್ವಜನಿಕವಾಗಿ ಗಣೇಶ ಹಬ್ಬವನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಪರೋಕ್ಷವಾಗಿ ರಾಮನಗರ ಜಿಲ್ಲೆಯ ಮಾಗಡಿ, ಬಾನುವಾಡಿ, ಕುದೂರು, ಬಿಸ್ಕೂರು ಸೇರಿ ನೂರಾರು ಗಣೇಶ ತಯಾರಕ ಕಲಾವಿದರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ.
ತುಮಕೂರಿನ ಭಾನು ಪ್ರಕಾಶ್ ಕುಟುಂಬದವರು ತಲೆತಲಾಂತರದಿಂದ ಜೇಡಿ ಮಣ್ಣಿನಿಂದ ಗಣೇಶನ ಮೂರ್ತಿಗಳನ್ನು ತಯಾರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ತಯಾರಿಸುವ ಗಣೇಶನ ಮೂರ್ತಿಗಳು ಬೆಂಗಳೂರು, ತುಮಕೂರು, ಮೈಸೂರು, ಆಂಧ್ರಪ್ರದೇಶ, ತಮಿಳುನಾಡು ಸೇರಿ ರಾಜ್ಯದ ಅನೇಕ ಭಾಗಗಳಲ್ಲಿ ಬಹಳಷ್ಟು ಬೇಡಿಕೆ ಪಡೆದಿವೆ. ಅಲ್ಲಿಂದ ಭಕ್ತರು ಬಂದು ಗಣೇಶನ ದೊಡ್ಡ ದೊಡ್ಡ ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಈ ಕುಟುಂಬದವರು ಕಾಲು ಅಡಿಯಿಂದ ಹದಿನೈದು ಅಡಿಯವರೆಗೆ ನಾನಾ ರೂಪದ ಗಣಪತಿಯನ್ನು ತಯಾರಿಸುವುದರಿಂದ ಇಲ್ಲಿನ ಗಣೇಶನಿಗೆ ಎಲ್ಲಿಲ್ಲದ ಬೇಡಿಕೆ ಇದೆ.
ಸಾರ್ವಜನಿಕರ ಹಿತದೃಷ್ಠಿಯಿಂದ ಈ ಬಾರಿ ಗಣೇಶ ಹಬ್ಬ ಆಚರಣೆ ನಿಷೇಧಿಸಿರುವುದು ಸ್ವಾಗತಾರ್ಹ ನಿರ್ಧಾರ ಎನ್ನಿಸಿದರೂ ಗಣೇಶಮೂರ್ತಿಗಳನ್ನು ತಯಾರು ಮಾಡಿ ವರ್ಷವಿಡಿ ಜೀವನೋಪಾಯಕ್ಕೆ ಒಂದಷ್ಟು ಕಾಸು ಮಾಡಿಕೊಳ್ಳುತ್ತಿದ್ದ ಗಣೇಶಮೂರ್ತಿ ಕಲಾವಿದರು ಈ ಬಾರಿ ಹೊಟ್ಟೆಪಾಡಿಗಾಗಿ ಬೇರೆ ಕೆಲಸಗಳತ್ತ ವಾಲುವಂತಾಗಿದೆ.
ನಮ್ಮ ಕಷ್ಟ ಯಾರಿಗೆ ಹೇಳೋಣ : ಪ್ರತಿ ವರ್ಷ ಹತ್ತಾರು ಜನ ಕಲಾವಿದರು ನಮ್ಮಲ್ಲಿಯೇ ಕೆಲಸ ಮಾಡುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಇರುವುದರಿಂದ ದೊಡ್ಡ ಗಾತ್ರದ ಮೂರ್ತಿಗಳ ಖರೀದಿಯಾಗುವುದಿಲ್ಲ. ಕೆಲವರು ಮನೆಯಲ್ಲಿಯೇ ಇಟ್ಟು ಪೂಜೆ ಮಾಡುವುದರಿಂದ ಎರಡು ಮತ್ತು ಎರಡುವರೆ ಅಡಿಯ ಗಣೇಶನ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಅನೇಕ ಕಲಾವಿದರು ಮೂರ್ತಿ ತಯಾರಿಕೆ ಕೆಲಸದಿಂದ ದೂರ ಉಳಿದು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿದ್ದಾರೆ.
ಈ ಕೆಲಸ ಬಿಟ್ಟು ನಮಗೇನೂ ಗೊತ್ತಿಲ್ಲ. ಈ ವರ್ಷ ಹಬ್ಬದ ವಾತಾವರಣ ಒಂದೆರಡು ತಿಂಗಳಿನಲ್ಲಿ ಒಂದಷ್ಟು ಕಾಸು ಮಾಡಿಕೊಂಡು ವರ್ಷವಿಡೀ ಜೀವನ ನಡೆಸುತ್ತಿದ್ದೆವು. ಈ ಬಾರಿ ಕೆಲಸವಿಲ್ಲ. ಹಣವೂ ಇಲ್ಲ ಎಂಬಂತಾಗಿದೆ. ನಮ್ಮ ಕಷ್ಟ ಯಾರಿಗೆ ಹೇಳಬೇಕು ಎಂದು ಕಲಾವಿದರು ಅಳಲು ತೋಡಿಕೊಳ್ತಾಯಿದ್ದಾರೆ.
ಕೆಲವರು ಊರು ಬಿಟ್ಟು ಬೇರೆಡೆ ಹೋಗಿದ್ದಾರೆ. ಈ ವೃತ್ತಿ ನಂಬಿಕೊಂಡಿರುವವರು ತೀವ್ರ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ನಮ್ಮಂತವರ ಸಮಸ್ಯೆ ಎಲ್ಲಿ ಕೇಳುತ್ತದೆ ? ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಈ ಬಾರಿ ಗಣೇಶನ ಹಬ್ಬ ಸಂಭ್ರಮದಿಂದ ದೂರವಾದ ನೋವು ಒಂದೆಡೆಯಾದ್ರೆ ಹಬ್ಬದಲ್ಲಿ ಖರೀದಿಯಾಗುತ್ತಿದ್ದ ಗಣೇಶ ಮೂರ್ತಿಗಳನ್ನೇ ಆಶ್ರಯಿಸಿದ ಕಲಾವಿದರು ಪಾಡು ಹೇಳ ತೀರದಾಗಿದೆ. ಸರ್ಕಾರ ಇವರ ನೆರವಿಗೆ ಬರಬೇಕೆನ್ನುವ ಆಗ್ರಹ ಕಲಾವಿದರದ್ದಾಗಿದೆ.