ರಾಮನಗರ: ಸ್ವಯಂಘೋಷಿತ ದೇವಮಾನವ ನಿತ್ಯಾನಂದನಿಗೆ ಒಂದಲ್ಲ ಒಂದು ಕಂಟಕಗಳು ಎದುರಾಗುತ್ತಲೇ ಇದ್ದು, ಇದೀಗ ರಾಮನಗರದ 3 ನೇ ಹೆಚ್ಚುವರಿ ನ್ಯಾಯಾಲಯ ಶಾಕ್ ಕೊಟ್ಟಿದೆ.
ಈಗಾಗಲೇ ನಿತ್ಯಾನಂದ ಹಾಗೂ ಪ್ರಕರಣ ಎರಡನೇ ಆರೋಪಿ ಗೋಪಾಲ ರೆಡ್ಡಿ ಸೇಲಂಗೆ ಜಾಮೀನು ರದ್ದಾಗಿದ್ದು, ಬಂಧನದ ವಾರೆಂಟ್ ಕೂಡ ಜಾರಿಯಾಗಿದೆ. ಇದೇ ವಿಚಾರವಾಗಿ ಇಂದು ರಾಮನಗರದ 3 ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.
ವಿಚಾರಣೆ ವೇಳೆ ಸಿಐಡಿ ಪರ ವಕೀಲ ರಘು, ನಿತ್ಯಾನಂದ ಹಾಗೂ ಆತನ ಆರು ಮಂದಿ ಶಿಷ್ಯರು ಮತ್ತು ಆರೋಪಿಗಳ ಪರ ವಕೀಲರು ಹಾಜರಾಗುತ್ತಿಲ್ಲ. ಈಗಾಗಲೇ ಬಂಧನದ ವಾರಂಟ್ ಆದೇಶವಾಗಿದೆ. ಇಷ್ಟಾದರೂ ನಿತ್ಯಾನಂದ ಪತ್ತೆಯಾಗಿಲ್ಲ. ಹಾಗಾಗಿ ನಿತ್ಯಾನಂದ ಸೇರಿದಂತೆ ಎರಡನೇ ಆರೋಪಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ವಾದ ಮಂಡಿಸಿದರು.
ಸಿಐಡಿ ಪರ ವಕೀಲರ ವಾದಕ್ಕೆ ಮನ್ನಣೆ ನೀಡಿದ ನ್ಯಾಯಾಧೀಶರು, ನಿತ್ಯಾನಂದ ಹಾಗೂ ಪ್ರಕರಣದ 2 ನೇ ಆರೋಪಿಯ ಆಸ್ತಿ ವಿವರ ಸಲ್ಲಿಕೆ ಮಾಡುವಂತೆ ಪ್ರಕರಣದ ತನಿಖಾ ಅಧಿಕಾರಿಗಳಿಗೆ ಆದೇಶ ಮಾಡಿದರು. ಅಲ್ಲದೇ ಮುಂದಿನ ವಿಚಾರಣೆಯನ್ನ ಮಾರ್ಚ್.23 ಕ್ಕೆ ಮುಂದೂಡಿತು.
ಇಂದು ಪ್ರಕರಣದ ದೂರುದಾರ ಲೆನಿನ್ ಕೂಡ ಸಾಕ್ಷಿ ಹೇಳಲು ಹಾಜರಾಗಿದ್ದರು. ಈ ಹಿಂದೆ ಸಾಕ್ಷಿ ಹೇಳಿಕೆ ನೀಡಲು ಲೆನಿನ್ ಗೈರಾಗಿದ್ದರಿಂದ ಲೆನಿನ್ ವಿರುದ್ಧ ಬಂಧನದ ವಾರೆಂಟ್ ಜಾರಿಯಾಗಿತ್ತು. ಇದೇ ವೇಳೆ ಬಂಧನದ ವಾರಂಟ್ ರದ್ದು ಮಾಡಬೇಕು. ಈ ಪ್ರಕರಣವನ್ನು ಹೈಕೋರ್ಟ್ ವರ್ಗಾವಣೆ ಮಾಡಬೇಕೆಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ಪ್ರಕರಣವನ್ನ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ನಿಮ್ಮ ಮೇಲೆ ಹೊರಡಿಸಿರುವ ಬಂಧನದ ವಾರಂಟ್ ರದ್ದು ಮಾಡುತ್ತಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗಿ ಎಂದು ಆದೇಶ ಮಾಡಿತ್ತು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಇಂದು ಲೆನಿನ್ ಹಾಜರಾಗಿದ್ದರು ಎಂದು ಸಿಐಡಿ ಪರ ವಕೀಲರಾದ ರಘು ತಿಳಿಸಿದ್ದಾರೆ.