ರಾಮನಗರ: ಸರ್ಕಾರದ ಜನನಿ ಸುರಕ್ಷಾ ಯೋಜನೆಯಡಿ ಬಿಡುಗಡೆಯಾದ 1.46 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳು ನಕಲಿ ಸಹಿ ಬಳಸಿ ನುಂಗಿ ಹಾಕಿರುವ ಆರೋಪ ಕೇಳಿ ಬಂದಿದೆ.
ಯೋಜನೆಯಡಿ ತಾಲೂಕು ಮಟ್ಟದ ಆರೋಗ್ಯಾಧಿಕಾರಿಗಳ ಜಂಟಿ ಖಾತೆಗೆ ಪ್ರತೀ ಬಾರಿ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಹಾಗೆಯೇ ತಾಲೂಕು ಆರೋಗ್ಯಾಧಿಕಾರಿ ಹಾಗೂ ಸೀನಿಯರ್ ಇನ್ಸ್ಪೆಕ್ಟರ್ ಜಂಟಿ ಖಾತೆಗೆ ಬಿಡುಗಡೆಗೊಂಡಿದ್ದ ಹಣದಲ್ಲಿ 1.46 ಲಕ್ಷ ರೂ. ಏಕಾಏಕಿ ಮಂಗಮಾಯವಾಗಿದೆ ಎನ್ನಲಾಗಿದೆ.
ಜನನಿ ಸುರಕ್ಷಾ ಯೋಜನೆಯಡಿ ಮನೆಯಲ್ಲಿ ಹೆರಿಗೆಯಾದರೆ 500 ರೂ.ಗಳ ಪ್ರೋತ್ಸಾಹಧನ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾದರೆ 700 ರೂ., ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆರಿಗೆ ಆದಲ್ಲಿ ಕ್ರಮವಾಗಿ 600 ಹಾಗೂ 700 ರೂ. ಹಾಗೂ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಹೆರಿಗೆಯಾದಲ್ಲಿ 1500 ರೂ. ಪ್ರೋತ್ಸಾಹಧನವನ್ನು ಆರೋಗ್ಯ ಇಲಾಖೆ ನೀಡಬೇಕಿತ್ತು. ಆದರಿಗ ಆ ಹಣವನ್ನು ಅಧಿಕಾರಿಗಳು ಎಗರಿಸಿದ್ದಾರೆ ಎಂಬ ಅಂಶ ಆರೋಗ್ಯಧಿಕಾರಿ ಡಾ. ಶಶಿಕಲಾ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಆದರೆ ಇನ್ನೂ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.