ಬೆಂಗಳೂರು: ರಾಮನಗರದಲ್ಲಿ ಮೂವರು ಪೌರಕಾರ್ಮಿಕರು ಮ್ಯಾನ್ ಹೋಲ್ಗೆ ಇಳಿದು ಜೀವ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ನಡೆಸಿರುವ ತನಿಖಾ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಮನಗರ ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ಗೆ ನಿರ್ದೇಶಿಸಿದೆ.
ಮನುಷ್ಯರಿಂದ ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013ರ ನಿಯಮಗಳನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೋರಿ ಎಐಸಿಸಿಟಿಯು ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರಿ ವಕೀಲರು, ಘಟನೆ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತ ವರದಿ ಸಲ್ಲಿಸಿದರು. ಜತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು 2021ರ ಜೂನ್ 4ರಂದು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದರು.
ವರದಿ ಪರಿಶೀಲಿಸಿದ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ನಡೆಸಿರುವ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ರಾಮನಗರ ಟೌನ್ ಪೊಲೀಸ್ ಠಾಣೆ ಇನ್ಸಪೆಕ್ಟರ್ಗೆ ಸೂಚಿಸಿತು. ಹಾಗೆಯೇ, ಪ್ರಕರಣ ಸಂಬಂಧ ನ್ಯಾಯಾಲಯ ನೀಡಿರುವ ಆದೇಶದ ಅನುಪಾಲನಾ ವರದಿ ಮತ್ತು ಕೈಗೊಂಡ ಕ್ರಮಗಳ ಕುರಿತು ವಿವರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ, ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರಾದ ಮೈತ್ರೇಯಿ ಕೃಷ್ಣನ್ ಪೀಠಕ್ಕೆ ಮಾಹಿತಿ ನೀಡಿ, ಕಲಬುರಗಿ ಜಿಲ್ಲೆಯ ಕೈಲಾಶ್ ನಗರದಲ್ಲಿ ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಇಳಿದ ವೇಳೆ ಕಾರ್ಮಿಕರಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ ಪ್ರಕರಣದಲ್ಲಿ ಸಂಬಂಧಪಟ್ಟ ಇಂಜಿನಿಯರ್ಗಳಿಗೆ ತನಿಖೆಯಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ಈ ವಿಚಾರವನ್ನು ಮುಂದಿನ ವಿಚಾರಣೆ ಪರಿಗಣಿಸಲಾಗುವುದು ಎಂದು ತಿಳಿಸಿತು.