ರಾಮನಗರ: ತಾಲೂಕಿನ ಕೈಲಾಂಚ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಹಾಸ್ಟೆಲ್ನಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳು ಕಜ್ಜಿ, ತುರಿಕೆ ಮೊದಲಾದ ಚರ್ಮರೋಗದಿಂದ ಪರದಾಡುತ್ತಿದ್ದು, ಸರಿಯಾದ ನೀರಿನ ವ್ಯವಸ್ಥೆ ಇಲ್ಲದಿರುವುದು ಸ್ವಚ್ಚತೆ ಬಗ್ಗೆ ಸಿಬ್ಬಂದಿ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂಬ ಆರೋಪ ಕೇಳಿ ಬಂದಿದೆ.
ಕೈಲಾಂಚ ಹೋಬಳಿಯ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಎರಡು–ಮೂರು ದಿನಕೊಮ್ಮೆ ಒಂದು ಗಂಟೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ಇದು ಅಡುಗೆ ಮತ್ತು ಮಕ್ಕಳ ನಿತ್ಯಕರ್ಮಕ್ಕೆ ಸಾಕಾಗುತ್ತಿದೆ. ಹೀಗಾಗಿ ಮಕ್ಕಳು ವಾರಕ್ಕೆ ಒಮ್ಮೆ ಮಾತ್ರ ಸ್ನಾನ ಮಾಡುವ ಪರಿಸ್ಥಿತಿ ಎದುರಾಗಿದೆ. ಸ್ವಚ್ಛತೆ ಕೊರತೆಯಿಂದಾಗಿ ಮಕ್ಕಳಲ್ಲಿ ಚರ್ಮರೋಗ ಉಲ್ಬಣಿಸಿದ್ದರೂ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದ ನಿರ್ಲಕ್ಷ್ಯ, ಎದ್ದು ಕಾಣಿಸುತ್ತಿದ್ದು ಪರಿಹಾರ ಕಾಣುವಲ್ಲಿ ವಿಫಲರಾಗಿದ್ದಾರೆ. ಮೂವತ್ತಕ್ಕೂ ಹೆಚ್ಚು ಮಕ್ಕಳಿಗೆ ಕಜ್ಜಿ ಕಾಣಿಸಿಕೊಂಡಿದ್ದು ಮೈಯೆಲ್ಲ ಹಬ್ಬಿಕೊಂಡಿದೆ. ಕೈ ಕಾಲು, ಹೊಟ್ಟೆ, ಗುಪ್ತಾಂಗಗಳಲ್ಲೂ ಕೆರೆತ ಹೆಚ್ಚಾಗಿದ್ದು, ಚರ್ಮ ಕಿತ್ತು ಬಂದು ರಕ್ತ ಸೋರುತ್ತಿದೆ. ಮಕ್ಕಳು ನಾಚಿಕೆಯಿಂದಾಗಿ ತಮ್ಮ ಪೋಷಕರು, ವೈದ್ಯರಲ್ಲೂ ಇದನ್ನು ಹೇಳಿಕೊಂಡಿಲ್ಲವಾದ್ದರಿಂದ ಕ್ರಮೇಣ ಇತರ ವಿದ್ಯಾರ್ಥಿಗಳಿಗೂ ರೋಗ ಹಬ್ಬಿದ್ದು ಎಲ್ಲರೂ ಆತಂಕದಲ್ಲಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆಯುತ್ತಿರುವ ವಸತಿ ಶಾಲೆಯಲ್ಲಿ ಪರಿಶಿಷ್ಟ ಜಾತಿಯ 104 ಬಾಲಕರು ಹಾಗೂ 28 ಬಾಲಕಿಯರು ಸೇರಿದಂತೆ ಒಟ್ಟು 138 ವಿದ್ಯಾರ್ಥಿಗಳಿದ್ದು. ಎಲ್ಲರನ್ನು ಎರಡು ಕಿರಿದಾದ ರೂಂಗಳಲ್ಲಿ ಇಡಲಾಗಿದೆ. ಒಟ್ಟು ನಾಲ್ಕು ಕೊಠಡಿಗಳು ಮಾತ್ರ ಇಲ್ಲಿದ್ದು. ಒಂದು ಕಟ್ಟಡದಲ್ಲಿನ ಎರಡು ಕೊಠಡಿಗಳು ಬಾಲಕಿಯರಿಗೆ ಮೀಸಲಿಡಲಾಗಿದೆ. ಮತ್ತೊಂದು ಕಟ್ಟಡದಲ್ಲಿನ ಎರಡು ಕೊಠಡಿಗಳಲ್ಲಿ ನೂರಕ್ಕೂ ಹೆಚ್ಚು ಬಾಲಕರು ವಾಸಿಸುತ್ತಿದ್ದಾರೆ. ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಇಡೀ ಹಾಸ್ಟೆಲ್ ಗೆ ಮೂರು ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ನಿರ್ಮಿಸಲಾಗಿದ್ದು, ಇದರಲ್ಲಿ ಒಂದು ಬಾಲಕಿಯರಿಗೆ ಹಾಗೂ ಉಳಿದ ಎರಡು ಬಾಲಕರಿಗೆ ಕೊಡಲಾಗಿದ್ದು ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಎರಡು ನಲ್ಲಿಗಳಲ್ಲಿ ಬರುತ್ತಿರುವ ನೀರು ಮುಖ ತೊಳೆಯಲು ಸಾಕಾಗುತ್ತದೆ ಅಷ್ಟೇ ಸ್ನಾನ ಮಾಡಬೇಕೆಂದರೂ ನೀರು ಸಿಗುವುದಿಲ್ಲ . ಕೆಲವೊಮ್ಮೆ ಬಟ್ಟೆ ಒಗೆಯಲೂ ನೀರು ಇರುವುದಿಲ್ಲ. ಊಟೋಪಚಾರ ಸಹ ಚೆನ್ನಾಗಿಲ್ಲ ಎಂದು ವಿದ್ಯಾರ್ಥಿ ನಿಲಯದಲ್ಲಿನ ಮಕ್ಕಳು ಅಳಲು ತೋಡಿಕೊಂಡಿದ್ದಾರೆ.
ಇಲ್ಲಿ ಸಮಸ್ಯೆ ಇರೋದು ನಿಜ ಅದರ ಬಗ್ಗೆ ಇಲಾಖೆಯ ಗಮನಕ್ಕೂ ಈ ಹಿಂದೆಯೇ ತರಲಾಗಿದೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದಾರೆ ಎಂದು ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ತಿಳಿಸಿದ್ದಾರೆ.