ರಾಮನಗರ: ಜಿಲ್ಲೆಯ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನುಸಿಪೀಡೆ ರೋಗದಿಂದ ತೆಂಗಿನ ಮರಗಳ ಸುಳಿಗಳು ಒಣಗಿ ಹೋಗುತ್ತಿದ್ದು, ಬೃಹತ್ತಾಗಿ ಬೆಳೆದ ತೆಂಗಿನ ಮರಗಳು ಕಾಯಿ ಕಟ್ಟುತ್ತಿಲ್ಲ. ಇದು ಇಲ್ಲಿನ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ.
ಜಿಲ್ಲೆಯ ರೈತರ ಜೀವನಾಡಿಯಾದ ತೆಂಗು ಬೆಳೆ ಈ ಬಾರಿಯೂ ನುಸಿ ರೋಗಕ್ಕೆ ತುತ್ತಾಗಿದೆ. ಇಲ್ಲಿನ ಶೇ.40 ಕ್ಕೂ ಹೆಚ್ಚು ಕುಟುಂಬಗಳು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಾರೆ. ಮೊದಮೊದಲು ತೆಂಗು ಬೆಳೆಯಿಂದ ಅಧಿಕ ಲಾಭ ಪಡೆಯುತ್ತಿದ್ದ ರೈತದೀಗ ಬಾರಿ ನಷ್ಟಕ್ಕೀಡಾಗುತ್ತಿದ್ದಾನೆ.
ತೆಂಗಿಗೆ ಕಾಣಿಸಿಕೊಳ್ಳುವ ನುಸಿ ಪೀಡೆ ರೋಗದಿಂದ ಅದರ ಸುಳಿ ಸಂಪೂರ್ಣವಾಗಿ ಒಣಗಲಾರಂಭಿಸಿದೆ. ಸುಮಾರು 50 ರಿಂದ 60 ಅಡಿ ಎತ್ತರವಾಗಿ ಬೆಳೆದ ತೆಂಗಿನ ಮರ ಕಾಯಿ ಇಲ್ಲದೇ ಸಂಪೂರ್ಣವಾಗಿ ಒಣಗುತ್ತಿದೆ.
ಕೆಲವು ತೆಂಗಿನ ಮರಗಳು ನುಸಿ ರೋಗದಿಂದ ಗಿಡದ ಗರಿಯೆಲ್ಲಾ ಒಣಗಿ ಬೀಳುತ್ತಿದೆ. ಕೆಲವೆಡೆ ಗಿಡದಲ್ಲಿ ಕಾಯಿ ಸಂಖ್ಯೆ ಕೂಡ ಕಡಿಮೆಯಾಗಿದೆ. ಇನ್ನೂ ಕೆಲ ರೈತರು ಕಾಯಿ ಬಾರದ ತೆಂಗಿನ ಮರಗಳನ್ನು ಕಡಿದು ಕಟ್ಟಿಗೆಗೆ ಬಳಸಿಕೊಂಡಿದ್ದಾರೆ.
ಜಿಲ್ಲೆಯ ಹೊಂಗನೂರು, ಬಿ.ವಿ.ಹಳ್ಳಿ, ಸಿಂಗರಾಜೀಪುರ, ಹನುಮಂತಪುರ, ಚಕ್ಕರೆ ಸೇರಿದಂತೆ ಹಲವು ಗ್ರಾಮದಲ್ಲಿ ತೆಂಗಿನ ಬೆಳೆಗೆ ನುಸಿರೋಗ ಬಂದಿದೆ. ಇದಲ್ಲದೇ ತೆಂಗಿನ ಮರಗಳು ನೀರಿಲ್ಲದೆ ಒಣಗಲಾರಂಭಿಸಿವೆ. ಅಧಿಕಾರಿಗಳು ಇತ್ತ ಇತ್ತ ಗಮನಹರಿಸಿ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಓದಿ: ನದಿ ಜೋಡಣೆ ಯೋಜನೆಗೆ ವಿರೋಧ : ಸ್ವರ್ಣವಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ಜನಾಂದೋಲನಕ್ಕೆ ಸಜ್ಜು