ರಾಮನಗರ: ಜಿಲ್ಲೆಯಲ್ಲಿ 44 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಯಾವುದೇ ತೊಂದರೆ ಇಲ್ಲ. ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳು ಲಭ್ಯವಿದ್ದು, ಕೊವ್ಯಾಕ್ಸಿನ್ ಲಸಿಕೆಯನ್ನು ಎರಡನೇ ಡೋಸ್ಗೆ ಮಾತ್ರ ಬಳಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವುದರಿಂದ ಶೇ.80 ರಷ್ಟು ಸೋಂಕು ಹರಡದಂತೆ ತಡೆಗಟ್ಟಬಹುದು. ಸಾರ್ವಜನಿಕರು ಇದನ್ನು ಕಡ್ಡಾಯವಾಗಿ ಪಾಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.
ನೆಗಡಿ, ಕೆಮ್ಮ, ಜ್ವರ ಮುಂತಾದ ಕೋವಿಡ್ ಲಕ್ಷಣ ಕಂಡು ಬಂದರೆ ತಕ್ಷಣ ಪರೀಕ್ಷೆಗೆ ಒಳಪಟ್ಟು ಚಿಕಿತ್ಸೆ ಪಡೆದುಕೊಳ್ಳಿ. ರೋಗ ಉಲ್ಬಣಗೊಂಡ ನಂತರ ಚಿಕಿತ್ಸೆ ಅವಧಿ ಹೆಚ್ಚಾಗುತ್ತದೆ. ಆಕ್ಸಿಜನ್, ಐಸಿಯು ವ್ಯವಸ್ಥೆ ಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸರಾಸರಿ 450 ಜನರಲ್ಲಿ ಸೋಂಕು ಬರುತ್ತಿದೆ. ಒಂದು ವಾರದಿಂದ 3,087 ಪ್ರಕರಣಗಳು ವರದಿಯಾಗಿದ್ದು, ಶೇ.64 ಸೋಂಕಿತರಿಗೆ ಹೋಮ್ ಐಸೊಲೇಷನ್ ಹಾಗೂ ಶೇ.25 ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಸಿಟಿವಿಟಿ ರೇಟ್ ಜಿಲ್ಲೆಯಲ್ಲಿ ಶೇ.30 ರಷ್ಟು ಇದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಹೋಮ್ ಐಸೊಲೇಷನ್ ಕಡಿಮೆ ಮಾಡಿ ಕೋವಿಡ್ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುವುದು. ಕನಕಪುರ ತಾಲ್ಲೂಕಿನಲ್ಲಿ -5, ಮಾಗಡಿ-2, ರಾಮನಗರ-3, ಮತ್ತು ಚನ್ನಪಟ್ಟಣದಲ್ಲಿ -2 ಕೋವಿಡ್ ಕೇರ್ ಸೆಂಟರ್ ತೆರೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆ ಇದ್ದರೆ ಹೋಬಳಿ ಮಟ್ಟದಲ್ಲೂ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು ಎಂದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುವ ಮೂಲಕ ಕೋವಿಡ್ ಸೋಂಕಿನ ಲಕ್ಷಣ ಇರುವವರ ಸರ್ವೆ ನಡೆಸುತ್ತಿದ್ದಾರೆ. ನಂತರ ಪ್ರತಿ ದಿನ ಪ್ರತಿ ತಾಲೂಕಿನ 3 ಗ್ರಾಮಗಳಲ್ಲಿ ಆರೋಗ್ಯ ಶಿಬಿರ ಆಯೋಜಿಸಿ ಅವಶ್ಯಕತೆ ಇದ್ದಲ್ಲಿ ಸ್ವಾಬ್ ಸಂಗ್ರಹಿಸಲಾಗುತ್ತಿದೆ. ವರದಿ ಬರುವವರೆಗೂ ಕಾಯದೆ ಸ್ಥಳದಲ್ಲೇ ಔಷಧಿಗಳನ್ನು ಸಹ ನೀಡಲಾಗುತ್ತಿದೆ. ಈ ಕೆಲಸಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎಎಂಒಗಳನ್ನು ನಿಯೋಜಿಸಲಾಗಿದೆ. ಪಿಹೆಚ್ಸಿಗಳಿಗೆ ಔಟ್ ಸರ್ಜನ್ಗಳನ್ನು ನಿಯೋಜಿಸಲಾಗಿದೆ. ಆರೋಗ್ಯ ಶಿಬಿರ 10 ರಿಂದ 12 ದಿನದೊಳಗೆ ಮುಗಿಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಡೋಸ್ ಶೇ.57 ಹಾಗೂ ಎರಡನೇ ಡೋಸ್ ಶೇ.38 ಜನರಿಗೆ ನೀಡಲಾಗಿದೆ. ಸರ್ಕಾರದ ಆದೇಶದಂತೆ ನಿಗದಿಪಡಿಸಿರುವ ಆದ್ಯತೆ ಗುಂಪಿನ 18 ವರ್ಷ ಮೇಲ್ಪಟ್ಟ ಕಟ್ಟಡ ಕಾರ್ಮಿಕರು, ಟೆಲಿಕಾಮ್ ಮತ್ತು ಇಂಟರ್ನೆಟ್ ಸೇವಾದಾರರು, ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ಪೆಟ್ರೋಲ್ ಬಂಕ್ ಸಿಬ್ಬಂದಿ, ಚಿತ್ರೋದ್ಯಮದವರು, ಅಡ್ವೊಕೇಟ್ ಗಳು, ಹೋಟೆಲ್ ಮತ್ತು ಆತಿಥ್ಯ ಸೇವಾದಾರರು, ಕೆಎಂಎಫ್ ಸಿಬ್ಬಂದಿ, ರೈಲ್ವೆ ಸಿಬ್ಬಂದಿ, ಗಾರ್ಮೆಂಟ್ ಕಾರ್ಖಾನೆ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ, ಜೈಲ್ ಸಿಬ್ಬಂದಿ, RSK ಕೆಲಸಗಾರರು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಆಟಗಾರರು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯ ಸಿಬ್ಬಂದಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಲಸಿಕೆ ನೀಡಲಾಗುವುದು ಎಂದು ವಿವರಿಸಿದರು.
ಹೊಸ ಜಿಲ್ಲಾಸ್ಪತ್ರೆಯ ಒಂದು ಭಾಗದಲ್ಲಿ 131 ಬೆಡ್ ಗಳನ್ನು ಸಿದ್ಧ ಮಾಡಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 120 ಐಸಿಯು ಬೆಡ್ ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆಸ್ಪತ್ರೆಯ ಇನ್ನಿತರ ಕೆಲಸಗಳನ್ನು ಪೂರ್ಣಗೊಳಿಸಲು 20 ಕೋಟಿ ರೂ ಅನುದಾನದ ಕೋರಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡಿದರೆ ಚಿಕಿತ್ಸೆ ಪಡೆದವರು ಸೂಕ್ತ ದಾಖಲಾತಿಗಳೊಂದಿಗೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಬಹುದಾಗಿದೆ. ಜಿಲ್ಲೆಯಲ್ಲಿ 5 ಬ್ಲ್ಯಾಕ್ ಫಂಗಸ್ ಪ್ರಕರಣಗಳು ವರದಿಯಾಗಿದ್ದು, ಇವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದೆ ಎಂದು ತಿಳಿಸಿದರು.