ರಾಮನಗರ: ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಹಾಗೂ ವಾಹನ ಸಂಚಾರ, ಸಾರ್ವಜನಿಕರ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿರುವ ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದೆಂದು ಯೋಜನಾ ನಿರ್ದೇಶಕ ಸೂರಜ್ ತಿಳಿಸಿದರು.
ಚನ್ನಪಟ್ಟಣ ನಗರಕ್ಕೆ ಆಗಮಿಸಿ ಪ್ರಮುಖ ರಸ್ತೆಗಳನ್ನು ವೀಕ್ಷಿಸಿದ ಬಳಿಕ ಫುಟ್‌ಪಾತ್ ವ್ಯಾಪಾರಿಗಳ ಜೊತೆ ಮಾತನಾಡಿದ ಅವರು, ಹಸಿರು ನ್ಯಾಯಾಧಿಕರಣ ಹಾಗೂ ಸರ್ಕಾರ ಆದೇಶವು ಕೂಡ ಸಾರ್ವಜನಿಕರಿಗೆ ತೊಂದರೆಯಾಗುವ ಫುಟ್‌ಪಾತ್ ವ್ಯಾಪಾರವನ್ನು ತೆರವುಗೊಳಿಸಬೇಕು ಎಂದಿದೆ. ಹೀಗಾಗಿ ವ್ಯಾಪಾರಿಗಳ ಜೀವನೋಪಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆದೇಶ ನೀಡಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಗರದ ಮಹಾತ್ಮಗಾಂಧಿ ರಸ್ತೆ, ಜೆ.ಸಿ.ರಸ್ತೆ, ಅಂಚೆ ಕಚೇರಿ ರಸ್ತೆ, ರೈಲು ನಿಲ್ದಾಣ ರಸ್ತೆ, ಹಳೆಯ ಕೋರ್ಟ್ ರಸ್ತೆ, ಸಾತನೂರು ರಸ್ತೆ, ಮದೀನಾ ಚೌಕ್ ಹಾಗೂ ವಿವಿಧ ರಸ್ತೆಗಳಲ್ಲಿನ ಫುಟ್‌ಪಾತ್ ತೆರವು ಮಾಡಿರುವ ಬಗ್ಗೆ ಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾಧಿಕಾರಿ ಆದೇಶಕ್ಕನುಗುಣವಾಗಿ ಭೇಟಿ ನೀಡಿರುವುದಾಗಿ ಯೋಜನಾ ನಿರ್ದೇಶಕರು ಹೇಳಿದರು.
ಇದೇ ಸಂದರ್ಭದಲ್ಲಿ ಫುಟ್‌ಪಾತ್ ವ್ಯಾಪಾರಿಗಳು ಮಾತನಾಡಿ, ಕೆಲವು ರಸ್ತೆಗಳಲ್ಲಿನ ವ್ಯಾಪಾರಿಗಳನ್ನು ತೆರವುಗೊಳಿಸಿ ಕೆಲವು ರಸ್ತೆಗಳಲ್ಲಿ ಬಿಟ್ಟಿರುವುದರ ಬಗ್ಗೆ ಯೋಜನಾ ನಿರ್ದೇಶಕರ ಗಮನ ಸೆಳೆದರು. ಪ್ರತಿಯೊಂದು ರಸ್ತೆಯಲ್ಲಿಯೂ ಇರುವ ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಲಾಗುತ್ತಿದೆ. ಇದರ ಬಗ್ಗೆ ಅನುಮಾನ ಬೇಡ ಎಂದು ಸ್ಥಳದಲ್ಲೇ ಇದ್ದ ಪೌರಾಯುಕ್ತ ಸಿ ಪುಟ್ಟಸ್ವಾಮಿಯವರಿಗೆ ನಗರದ ಯಾವುದೇ ರಸ್ತೆಯಲ್ಲಿ ವ್ಯಾಪಾರ ಮಾಡುವ ಫುಟ್‌ಪಾತ್ ವ್ಯಾಪಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಯೋಜನಾ ನಿರ್ದೇಶಕ ಸೂರಜ್ ಸೂಚಿಸಿದರು.