ಚನ್ನಪಟ್ಟಣ: ಕಳೆದೊಂದು ತಿಂಗಳಿಂದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ದುರಸ್ತಿ ನೆಪವೊಡ್ಡಿ ಕುಡಿಯುವ ನೀರು ಬಿಡುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಪಾರ್ವತಿ ಚಿತ್ರಮಂದಿರದ ರಸ್ತೆಗೆ ಹೊಂದಿಕೊಂಡಿರುವ ಬೋರ್‌ವೆಲ್ ದುರಸ್ತಿಗೆ ಬಂದು ಒಂದು ತಿಂಗಳಾಗಿದೆ. ಇಲ್ಲಿ ಕಾವೇರಿ ನೀರಾವರಿ ನಿಗಮದ ಸಿಬ್ಬಂದಿ ಸ್ಥಳ ಪರಿಶೀಲಿಸಿದ್ದು, ಮುಚ್ಚಿದ ಸಿಮೆಂಟ್ ಚಪ್ಪಡಿಗಳನ್ನು ತೆರೆದು ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ಕುಡಿಯುವ ನೀರಿಗೆ ಭಾರಿ ಸಮಸ್ಯೆ ಉಂಟಾಗಿದೆ. ಟ್ರ್ಯಾಕ್ಟರ್ ಮೂಲಕ ಸರಬರಾಜು ಮಾಡುವ ನೀರನ್ನು ತರಲು ಪಕ್ಕದ ರಸ್ತೆಗೆ ಹೋಗುವ ದುಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ನೀರಾವರಿ ನಿಗಮದ ಅಧಿಕಾರಿಗಳು ಬರಬೇಕು ಎಂದು ಒತ್ತಾಯಿಸಿ ಕಚೇರಿಯ ಮುಂಬದಿ ಗೇಟ್ ಬಂದ್ ಮಾಡಿದ ಪ್ರತಿಭಟನಾಕಾರರು ಅಲ್ಲೇ ಕುಳಿತು ಘೋಷಣೆ ಕೂಗಿದರು. ಈ ವೇಳೆ ಸ್ಥಳಕ್ಕೆ ನಿಗಮದ ಎಂಜಿನಿಯರ್ ಸದಾಶಿವಯ್ಯ ಭೇಟಿ ನೀಡಿ, ನಾಳೆ ಬೆಳಗ್ಗೆ ಬೋರ್ ಸರಿಪಡಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಡಲಾಗಿದೆ.