ರಾಮನಗರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದು, ಕಾರ್ಯಕರ್ತರು ಡಿಕೆಶಿ ಬಂಧನ ವಿರೋಧಿಸಿ ರಾಮನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕನಕಪುರದಲ್ಲಿ ಮೈಸೂರು-ಕನಕಪುರ ಹೆದ್ದಾರಿಯಲ್ಲಿ ಪೊಲೀಸರೆದುರೇ ಬಸ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಬಂದ್ಗೆ ಕರೆ ನೀಡಿದ್ದು, ಬೆಳಗ್ಗೆಯಿಂದಲೇ ಬಸ್ ಸಂಚಾರ ವಿರಳವಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿಯೂ ವಾಹನ ಸಂಚಾರ ಸ್ಥಗಿತಗೊಂಡಂತಾಗಿದೆ. ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವ ಹಿನ್ನೆಲೆಯಲ್ಲಿ ಈಗಾಗಲೇ ಸೇನಾ ತುಕಡಿ ಜೊತೆಗೆ ಡಿಆರ್ ಹಾಗೂ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ಗಾಗಿ ಮೊಕ್ಕಾಂ ಹೂಡಿದ್ದಾರೆ. ಇನ್ನು ಡಿಕೆಶಿ ಸ್ವಕ್ಷೇತ್ರ ಕನಕಪುರದಲ್ಲಿ ಸ್ವತಹ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ರಾಮನಗರ ಮತ್ತು ಕನಕಪುರದಲ್ಲಿ ಬಹುತೇಕ ಉದ್ವಿಘ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಶಾಲಾ-ಕಾಲೇಜುಗಳಿಗೆ ರಾಮನಗರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ರಜೆ ಘೋಷಿಸಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಮದ್ಯ ಮಾರಾಟ ಕೂಡ ನಿಷೇಧಿಸಲಾಗಿದೆ.