ರಾಮನಗರ: ನೂತನವಾಗಿ ನಿರ್ಮಿಸುತ್ತಿರುವ ಬೆಂಗಳೂರು, ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಜಮೀನು ಹಾಳಾಗಿದೆ ಎಂದು ಆರೋಪಿಸಿ ವಿಶೇಷ ಚೇತನ ಸಹೋದರರು ಪ್ರತಿಭಟನೆ ನಡೆಸಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಬಳಿ ಹೆದ್ದಾರಿ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ತಿಟ್ಟಮಾರನಹಳ್ಳಿಯ ಈ ವಿಶೇಷ ಚೇತನ ಸಹೋದರರಾದ ವೇಣುಗೋಪಾಲ್ ಹಾಗೂ ನವೀನ್ ಕುಮಾರ್ ಎಂಬುವವರಿಗೆ ಸೇರಿದ ಜಮೀನಿಗೆ ಇತ್ತೀಚೆಗೆ ಮಳೆ ನೀರು ಜಮೀನಿಗೆ ನುಗ್ಗಿ 50 ಕ್ಕೂ ಹೆಚ್ಚು ತೆಂಗಿನ ಮರಗಳು ನಾಶವಾಗಿದ್ದವು.
ಅವೈಜ್ಞಾನಿಕ ಬೆಂಗಳೂರು ಮೈಸೂರು ಹೆದ್ದಾರಿಯಿಂದ ಮಳೆ ನೀರು ಜಮೀನಿಗೆ ನುಗ್ಗಿದೆ ಎಂದು ಈ ಸಹೋದರರು ಆರೋಪಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಡಿಬಿಎಲ್ ಕಂಪನಿ ಹಾಗೂ ತಾಲೂಕು ಆಡಳಿತದ ಗಮನಕ್ಕೆ ತಂದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಬೇಸರ ವ್ಯಕ್ತಪಡಿಸಿದ್ದಾರೆ.
ಇದೀಗ ಪರಿಹಾರಕ್ಕಾಗಿ ಪ್ರತಿಭಟನೆ ಹಾದಿ ಹಿಡಿದ ವಿಶೇಷ ಚೇತನ ಸಹೋದರರು, ಈ ಕೂಡಲೇ ಬೆಳೆ ನಾಶದ ಪರಿಹಾರ ನೀಡಿ, ಜಮೀನು ಸರಿಪಡಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಓದಿ: ಶಿವಮೊಗ್ಗ: ಗಣೇಶೋತ್ಸವ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಡಿಸಿ ಸೂಚನೆ