ರಾಮನಗರ : ನಗರದ ಮಾಗಡಿ ಮುಖ್ಯರಸ್ತೆಯಲ್ಲಿ ರಸ್ತೆಗಳು ಗುಂಡಿ ಬಿದ್ದ ಪರಿಣಾಮ ಮಳೆ ನೀರು ನಿಂತು ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಸ್ಕೂಲ್‌ಗೆ ತೆರಳುವ ವೇಳೆ ಮಗುವೊಂದು ಬಿದ್ದು ಗಾಯಗೊಂಡಿದ್ದರಿಂದ ಸ್ಥಳೀಯರು ಪ್ರತಿಭಟನೆ ನಡೆಸಿದರು.
ನಗರದ ಕೆಂಪೇಗೌಡ ಸರ್ಕಲ್ ಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಎದುರು ಮುಖ್ಯರಸ್ತೆಯಲ್ಲಿಯೇ ದೊಡ್ಡ ಗುಂಡಿಯಾಗಿದೆ. ಹಲವು ಬಾರಿ ದೂರು ನೀಡಿದ್ದರೂ ಸ್ಥಳೀಯ ನಗರಸಭೆಯಾಗಲಿ ಅಥವಾ ಚುನಾಯಿತ ಪ್ರತಿನಿಧಿಗಳಾಗಲಿ ಕ್ರಮಕೈಗೊಂಡು ರಸ್ತೆ ಸರಿಪಡಿಸುವ ಕಾರ್ಯಕ್ಕೆ ಮುಂದಾಗಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಪ್ರತಿಭಟನೆ ನಡೆಸಿದಾಗ ನೆಪಕ್ಕೆಂಬಂತೆ ಮಣ್ಣು ಮುಚ್ಚಲಾಗಿತ್ತು . ಕೂಡಲೇ ಶಾಶ್ವತ ಪರಿಹಾರವಾಗಿ ಟಾರ್ ಮಾಡಿಸಿಕೊಡುವುದಾಗಿ ಮುಖಂಡರು ಭರವಸೆ ನೀಡಿದ್ದರೂ ಅದು ಈವರೆಗೂ ಮಾಡಿಲ್ಲ. ಆದರೆ, ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಣ್ಣು ಕೊಚ್ಚಿ ಹೋಗಿದೆ. ರಸ್ತೆಯಲ್ಲಾದ ಗುಂಡಿಯಲ್ಲಿ ನೀರು ನಿಂತಿದ್ದು ವಾಹನ ಚಾಲನೆ ಕೂಡ ದುಸ್ತರವಾಗಿದೆ. ಅಲ್ಲದೆ, ಮಕ್ಕಳು ಶಾಲೆಗೆ ಗೇಟ್ ಬಳಿ ನಡೆದು ಹೋಗುವಾಗ ರಸ್ತೆಯ ಗುಂಡಿಗಳಿದ್ದು, ಇಂದು ಶಾಲಾ ಮಗುವೊಂದು ಬಿದ್ದು ಗಾಯಗೊಂಡಿದ್ದರಿಂದ ಸ್ಥಳೀಯರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಿಂದಾಗಿ ಮಾಗಡಿ ಮುಖ್ಯರಸ್ತೆ ಬಂದ್ ಆಗಿ ಸಂಚಾರ ವ್ಯವಸ್ತೆ ಅಸ್ತವ್ಯಸ್ತಗೊಂಡಿದ್ದು ಸ್ಥಳಕ್ಕೆ ಐಜೂರು ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ವಿಫಲವಾಗಿ, ಸ್ಥಳಕ್ಕೆ ನಗರಸಭೆ ಆಯುಕ್ತರು ಬರಬೇಕು ರಸ್ತೆ ಸರಿಪಡಿಸಬೇಕು ಎಂದು ನಗರಸಭೆ ಆಯುಕ್ತರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಸ್ಥಳಕ್ಕಾಗಮಿಸಿದ ನಗರಸಭೆ ಆಯುಕ್ತೆ ಶುಭ ಅವರಿಗೆ ಘೇರಾವ್ ಹಾಕಿದ ಪ್ರತಿಭಟನಾಕಾರರು ಅವರ ವಿರುದ್ದ ಘೋಷಣೆ ಕೂಗಿದರು. ನಂತರ ಶುಭ ಇದು ಪಿಡಬ್ಲ್ಯೂಡಿ ಇಲಾಖೆಗೆ ಬರುತ್ತೆ ಆದ ಕಾರಣ ರಸ್ತೆ ರಿಪೇರಿ ನಾವು ಮಾಡೋದು ಆಗಲ್ಲ ನಾವು ತಾತ್ಕಾಲಿಕವಾಗಿ ಸರಿಪಡಿಸಬಹುದು ಆದ್ದರಿಂದ ಕೂಡಲೇ ತುರ್ತುಕ್ರಮ ಕೈಗೊಳ್ಳುವ ಭರವಸೆ ನೀಡಿ ಈ ವಿಚಾರದಲ್ಲಿ ಸಂಬಂಧಿಸಿದ ಇಲಾಖೆಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಪ್ರತಿಭಟನಾಕಾರರ ಮನವೊಲಿಸಿದರು. ನಂತರ ಸಾರ್ವಜನಿಕರು ವಾರದ ಗಡುವು ನೀಡಿ ಪ್ರತಿಭಟನೆ ಕೈಬಿಟ್ಟರು.