ರಾಮನಗರ: ಕೃಷಿ ಕುಟುಂಬದ ಪೌರಾಣಿಕ ಹಿನ್ನೆಲೆಯುಳ್ಳ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಈ ಬಾರಿಯ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿರುವುದು ರೇಷ್ಮೆ ನಗರಿಗೆ ಹೆಮ್ಮೆ ತಂದಿದೆ.
ಜಿಲ್ಲೆಯ ಮಾಗಡಿ ತಾಲೂಕಿನ ಜುಟ್ಟನಹಳ್ಳಿ ಕೃಷಿ ಕುಟುಂಬದ ಎನ್.ಮಲ್ಲೇಶಯ್ಯ ಅವರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎನ್.ಮಲ್ಲೇಶಯ್ಯ ಅವರಿಗೆ ಬಾಲ್ಯದಿಂದ ಪೌರಾಣಿಕ ನಾಟಕಗಳಂದ್ರೆ ಬಹಳ ಅಚ್ಚುಮೆಚ್ಚು. ಅದರಲ್ಲೂ ಕುರುಕ್ಷೇತ್ರ ಪೌರಾಣಿಕ ನಾಟಕಗಳಲ್ಲಿ ಶ್ರೀ ಕೃಷ್ಣನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
1965 ರಿಂದ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದಾರೆ. ಪಾಂಡು ವಿಜಯ ನಾಟಕದಲ್ಲಿ ದ್ರೌಪತಿಯಾಗಿ, ಸದಾರಮೆ ನಾಟಕದಲ್ಲಿ ರಾಜಾಮಾರ್ತಾಂಡ ಪಾತ್ರ, ಕುರುಕ್ಷೇತ್ರದಲ್ಲಿ ಶ್ರೀಕೃಷ್ಣನ ಪಾತ್ರ ಮತ್ತು ವಿಧುರ, ಕರ್ಣ, ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಂಗನಿರ್ದೇಶಕ ವಜ್ರಪ್ಪನವರ ಮಾರ್ಗದರ್ಶನದಲ್ಲಿ ಬಬ್ರುವಾಹನನ ಪಾತ್ರವನ್ನು ಸಹ ಮನೋಜ್ಞವಾಗಿ ಅಭಿನಯಿಸಿದ್ದು, ರವೀಂದ್ರ ಕಲಾ ಕ್ಷೇತ್ರದಲ್ಲಿ ಸನ್ಮಾನಿತರಾಗಿದ್ದಾರೆ.
ಎಸ್.ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಡಾ.ರಾಜ್ ಕುಮಾರ್ ಅವರು ಮಲ್ಲೇಶಯ್ಯ ಅವರ ಕೃಷ್ಣಸಂಧಾನ ನಾಟಕವನ್ನು ವೀಕ್ಷಿಸಿದ್ದರು. ಶ್ರೀ ಕೃಷ್ಣನ ಪಾತ್ರ ವೀಕ್ಷಿಸಿದ ಡಾ. ರಾಜ್ಕುಮಾರ್, ಮಲ್ಲೇಶಯ್ಯ ಅವರನ್ನು ಅಭಿನಂದಿಸಿದ್ದರು.
ಆಗಸ್ಟ್ 8, 1954ರಲ್ಲಿ ಜುಟ್ಟನಹಳ್ಳಿ ನಿಂಗೇಗೌಡರ ಪುತ್ರರಾಗಿ ಜನಿಸಿದ ಇವರು, ರಂಗಭೂಮಿಯಿಂದ ಸಿನಿಮಾ ತೆರೆಗೆ ಬಂದ ವಜ್ರಮುನಿ, ಮುಸೂರಿ ಕೃಷ್ಣಮೂರ್ತಿ ವಜ್ರಪ್ಪ, ಕರಿಬಸವಯ್ಯ ಅವರಂತಹ ಹಿರಿಯ ಕಲಾವಿದರೊಂದಿಗೆ ಹಲವು ನಾಟಕಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇದಲ್ಲದೆಯೇ ರಾಮಾಯಣ, ಮಹಾಭಾರತ, ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕದಲ್ಲಿ ರಾವಣಾಸುರನ ಪಾತ್ರ ಮಾಡಿದ್ದಾರೆ. ಹಲವು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ.
ಮಾದರಿ ಹೈನುಗಾರಿಕೆಗೆ ಹೆಸರುವಾಸಿ :
ಹಳ್ಳಿಕಾರ್ ತಳಿಯ ರಾಸುಗಳನ್ನು ಸಾಕುವಲ್ಲಿ ಇವರು ನಿಪುಣರು. ಸಿದ್ದಗಂಗಾ ಮಠದಲ್ಲಿ ನಡೆದ ರಾಸುಗಳ ಜಾತ್ರೆಯಲ್ಲಿ ಸಿದ್ದಗಂಗಾ ಮಠಾಧ್ಯಕ್ಷರಾಗಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರಿಂದ ಪ್ರಥಮ ಬಹುಮಾನ ಗಳಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರದ ಪಶುಸಂಗೋಪನಾ ಇಲಾಖೆ ಮಾ. 23, 1997ರಲ್ಲಿ ಮಹಾರಾಷ್ಟ್ರದ ಸಿಂಧೂದುರ್ಗದ ಓರಸ್ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ 45ನೇ ಪ್ರದರ್ಶನದಲ್ಲಿ ಭಾಗವಹಿಸಿ, ಹಳ್ಳಿಕಾರ್ ತಳಿಯ ರಾಸುಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದರು. 1997ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಗೋಪಿನಾಥ ಮುಂಡೆ ಅವರಿಂದ ಗೌರವಿಸಲ್ಪಟ್ಟಿದ್ದಾರೆ.
ಇಂತಹ ಬಹುಮುಖ ಪ್ರತಿಭೆಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.