ರಾಮನಗರ: ಮುತ್ತಪ್ಪರೈ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ. ಭೂಗತ ಲೋಕದ ಮಾಜಿ ದೊರೆ ಎಂದೇ ಖ್ಯಾತರಾಗಿದ್ದ ಪುತ್ತೂರು ಸುಶೀಲಾ ರೈ, ನಾರಾಯಣ ರೈ ಅವರ ಪುತ್ರ ನೋಡಲು ಸ್ಪುರದ್ರೂಪಿ ಹಾಗೂ ದೃಢಕಾಯರಾಗಿದ್ದ ಮುತ್ತಪ್ಪ ರೈ ಎಲ್ಲರ ಆಕರ್ಷಣೆ ಎಂದರೂ ತಪ್ಪಲ್ಲ. ಬಹುಶಃ ಭೂಗತ ಲೋಕದಲ್ಲಿ ಅಷ್ಟು ಸುಂದರ ವ್ಯಕ್ತಿ ಇನ್ನೊಬ್ಬ ಇರಲಿಕ್ಕಿಲ್ಲ.
ಸಾಮಾನ್ಯ ರೈತ ಕುಟುಂಬದಿಂದ ಬಂದು ದೇಶ ವಿದೇಶಗಳಲ್ಲಿ ಭೂಗತ ಲೋಕವನ್ನು ಕಟ್ಟಿ ಆಳಿದ್ದ ರೈ ಕೆಲವು ವರ್ಷಗಳ ಹಿಂದೆ ತಮ್ಮ ರೌಡಿಸಂ ಚಟುವಟಿಕೆಗಳಿಗೆ ವಿದಾಯ ಹೇಳಿ ಸಮಾಜ ಸೇವೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದರು. ಅದಕ್ಕಾಗಿಯೇ ಜಯಕರ್ನಾಟಕ ಸಂಘಟನೆ ಮುಖಾಂತರ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಹುಟ್ಟೂರು ಪುತ್ತೂರು ಮಹಾಲಿಂಗೇಶ್ವರ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಳಿಗೆ ಕೊಡುಗೆ ನೀಡಿದ್ದರು. ಅಷ್ಟೇ ಅಲ್ಲದೆ ಭೂಗತ ಜಗತ್ತಿನ ನಂಟು ಕಳಚಿಕೊಂಡ ಬಳಿಕ ತಮ್ಮ ಸೆಕ್ಯೂರಿಟಿ ಬಹಳ ಟೈಟ್ ಆಗಿಯೇ ಇಟ್ಟುಕೊಂಡಿದ್ದ ರೈ, ಬಿಡದಿ ಬಳಿ ತಮ್ಮ ಬೃಹತ್ ಮನೆ ಮತ್ತು ಸುಂದರ ಸಾಮ್ರಾಜ್ಯ ಕಟ್ಟಿಕೊಂಡಿದ್ದರು.
ಈ ಸುಂದರ ಕುಟುಂಬದಲ್ಲಿ ಮಡದಿ ರೇಖಾ ಮುತ್ತಪ್ಪ ರೈ ಮಾರಕ ರೋಗ ಕ್ಯಾನ್ಸರ್ನಿಂದಲೇ ಸಾವನ್ನಪ್ಪಿದ್ದರು. ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ನರಳುತ್ತಿದ್ದ ಮುತ್ತಪ್ಪ ರೈ ಸಾವಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತ್ತು. ಆಗ ಸ್ವತಃ ಮುತ್ತಪ್ಪ ರೈ ಸುದ್ದಿಗೋಷ್ಠಿ ನಡೆಸಿ, ನಾನು ಚೆನ್ನಾಗಿದ್ದೇನೆ. ನಾನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ. ಸದ್ಯಕ್ಕೆ ಐ ಆ್ಯಮ್ ಆಲ್ ರೈಟ್ ಎಂದಿದ್ದರು.
ವಿಲ್ ಪವರ್ ಇರೋತನಕ ನಾನು ಬದುಕುಳಿಯುತ್ತೇನೆ ಎನ್ನುತ್ತಿದ್ದ ಮುತ್ತಪ್ಪ ರೈ, ತಮ್ಮ ಸಾಮ್ರಾಜ್ಯದ ಎಲ್ಲಾ ಹೊಣೆಗಾರಿಕೆಗಳನ್ನ ಯಾರ್ಯಾರು ಹೊರಬೇಕೆಂದು ತೀರ್ಮಾನಿಸಿ ವಿಲ್ ಮಾಡಿಟ್ಟಿದ್ದರು. ಪ್ರತಿ ವರ್ಷ ಸುಮಾರು ನಾಲ್ಕು ನೂರು ಕೋಟಿ ಆದಾಯ ತೆರಿಗೆ ಕಟ್ಟುತ್ತಿದ್ದ ಮುತ್ತಪ್ಪ ರೈ ಆಸ್ತಿ ಅವರೇ ಹೇಳಿಕೊಂಡಂತೆ ಸಾವಿರಾರು ಕೋಟಿ ಇದೆ.
ತೋಟ, ಕೃಷಿ ಅಂದರೆ ಅವರಿಗೆ ಇಷ್ಟ. ಹೂ ಬೆಳೆಸುವ ಹುಚ್ಚು ಜಾಸ್ತಿ ಹೊಂದಿದ್ದ ಮುತ್ತಪ್ಪ ರೈಗೆ ಸಕಲೇಶಪುರ, ಪಾಂಡವಪುರ, ಕಬಿನಿ, ಮೈಸೂರು, ಮಡಿಕೇರಿ, ಬಿಡದಿ ಸೇರಿದಂತೆ ಹಲವೆಡೆ ಕೃಷಿ ಭೂಮಿ ಇದೆ. ಅಲ್ಲದೆ ದೇವನಹಳ್ಳಿ ಯಲಹಂಕ ಬಳಿ ಕಮರ್ಷಿಯಲ್ ಪ್ರಾಪರ್ಟಿ ಇದೆ. 15ಕ್ಕೂ ಹೆಚ್ಚು ಡೆವಲಪರ್ಸ್ ಕಂಪನಿಗಳ ಪಾಲುದಾರರಾಗಿದ್ದಾರೆ. ಸದಾಶಿವ ನಗರ ಹಾಗೂ ಬಿಡದಿಯಲ್ಲಿ ಮನೆ ಇದೆ. ದುಬೈನಿಂದ ಬಂದಾಗ ಜೈಲು ವಾಸ ಮುಗಿಸಿ ಬಂದು ಬಿಡದಿಯಲ್ಲಿ ಮನೆ ಆಯ್ಕೆ ಮಾಡಿಕೊಂಡ ಮುತ್ತಪ್ಪ ರೈಗೆ ಅಚ್ಚುಮೆಚ್ಚು ಬಿಡದಿ ಮನೆ.
ಜಯರಾಜ್, ಕೊತ್ವಾಲ್ ರಾಮಚಂದ್ರ, ರವಿ ಪೂಜಾರಿಯಂತಹ ಡಾನ್ಗಳು ಕೂಡ ಮುತ್ತಪ್ಪ ರೈಗೆ ಒಂದು ಕ್ಷಣ ಹೆದರುತ್ತಿದ್ದರು ಎನ್ನಲಾಗುತ್ತಿತ್ತು. ಅಷ್ಟರ ಮಟ್ಟಿಗಿನ ಹವಾ ಹೊಂದಿದ್ದ ಮುತ್ತಪ್ಪ ರೈ ಸುಂದರ ದೇಹಕಾಯ ಅವರ ಗಡ್ಡದ ಲುಕ್ ಜೊತೆಗೆ ಕಪ್ಪು ಬಣ್ಣದ ಸೆಕ್ಯೂರಿಟಿ ಸರ್ಕಲ್ ಕೂಡ ಎಲ್ಲರೂ ಒಂದು ಕ್ಷಣ ಮೈ ಮರೆತು ನೋಡುವಂತಿತ್ತು.
ಈ ನಡುವೆ ಮುತ್ತಪ್ಪ ರೈ ಮಡದಿ ರೇಖಾ ರೈ ಕೂಡ ಕ್ಯಾನ್ಸರ್ ಬಾಧಿತರಾಗಿ ಸಾವನಪ್ಪಿದ್ದರು. ನಂತರ ಖ್ಯಾತ ಹೋಟೆಲ್ ಉದ್ಯಮಿ ಅನುರಾಧ ಅವರನ್ನ ವರಿಸಿದ್ದರು. ಆದರೆ ಅನಾರೋಗ್ಯದ ಹಿನ್ನೆಲೆ ಅವರೂ ಬಿಟ್ಟಿದ್ದರು. ಅದಾದ ಬಳಿಕ ಸುದ್ದಿಗೋಷ್ಠಿಯಲ್ಲೇ ಅಗ್ನಿಸಾಕ್ಷಿಯಾಗಿ ಕಟ್ಟಿಕೊಂಡವರೇ ಶಾಶ್ವತ ಎನ್ನುವ ಮಾತನ್ನ ಸೂಕ್ಷ್ಮವಾಗಿ ಹೇಳಿದ್ದರು.
ಮುತ್ತಪ್ಪ ರೈ ಅವರಿಗೆ ಇಬ್ಬರು ಮಕ್ಕಳು. ರಿಖಿ ರೈ ಬಿಡದಿಯಲ್ಲಿ ಇದ್ದು, ಮೊದಲನೇಯ ಮಗ ರಾಖಿ ರೈ ಕೆನಡಾದಲ್ಲಿ ವಾಸವಿದ್ದಾರೆ. ಬ್ರಿಜಿಲ್ನ ಯುವತಿಯನ್ನು ಮದುವೆಯಾಗಿದ್ದು, ಅಲ್ಲಿಯೇ ನೆಲೆಸಿದ್ದಾರೆ.
ಒಂದು ಕಾಲದಲ್ಲಿ ಭೂಗತ ಜಗತ್ತನ್ನೇ ತನ್ನ ಕಿರುಬೆರಳಲ್ಲಿಟ್ಟುಕೊಂಡಿದ್ದ ಮುತ್ತಪ್ಪ ರೈ, 'ಎಷ್ಟೇ ದುಡ್ಡು, ಎಷ್ಟೇ ವಿದ್ಯೆ, ಎಷ್ಟೇ ದೊಡ್ಡ ದೊಡ್ಡ ಡಾಕ್ಟರ್ಸ್ ಗೊತ್ತಿದ್ರೂ ಸಾವನ್ನ ಗೆಲ್ಲೋಕಾಗಲ್ಲಾ, ಮುಂದೂಡೋದಕ್ಕೂ ಸಾಧ್ಯವಿಲ್ಲ' ಎಂದು ಹೇಳಿದ್ದರು.
ನಿರಂತರ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ರೈ, ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷರಾಗಿದ್ದರು. ಎಂ.ಆರ್. ಸ್ಪೋರ್ಟ್ಸ್ ಸಂಸ್ಥೆ ಹುಟ್ಟು ಹಾಕಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದರು.