ರಾಮನಗರ: ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಬಗ್ಗೆ ಅವರ ಕುಟುಂಬ ವರ್ಗ ಪ್ರತಿಕ್ರಿಯೆ ನೀಡಿದೆ.
ಕಳೆದ ಒಂದು ತಿಂಗಳಿಂದ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಇದೆಲ್ಲಾ ಊಹಾಪೋಹ. ಬಿಡದಿಯಲ್ಲಿರುವ ಮುತ್ತಪ್ಪ ರೈ ನಿವಾಸದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಅವರು ಕ್ಷೇಮವಾಗಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಇದು ಮೂರನೇ ಸಲ. ಹೀಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಅವರ ಆಪ್ತ ವಲಯ ವಿಷಾದ ವ್ಯಕ್ತಪಡಿಸಿದೆ.

ಮುತ್ತಪ್ಪ ರೈ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಇತ್ತೀಚಿಗೆ ಪತ್ರಿಕಾಗೋಷ್ಠಿ ನಡೆಸಿದ್ದರು. ಸಾಮಾಜಿಕ ಜಾಲತಾಣಗಳು ಇಲ್ಲದ ಸುದ್ದಿಯನ್ನಳನ್ನೇ ಹಬ್ಬಿಸುತ್ತಿವೆ. ನಾನು ಆರಾಮವಾಗಿದ್ದೇನೆ ಎಂದಿದ್ದರು. ನಂತರ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿತ್ತು. ಇದೀಗ ಅವರ ಸಾವಿನ ಸುದ್ದಿ ಹರಿದಾಡುತ್ತಿದೆ. ಯಾರೋ ಬೇಕಂತಲೇ ಈ ರೀತಿ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಚೆನ್ನಾಗಿದೆ. ಅವರು ಚೆನ್ನಾಗಿದ್ದಾರೆ ಎಂದು ಅವರ ಸೋದರ ಸಂಬಂಧಿ (ಬಾಮೈದ) ಪ್ರಕಾಶ್ ರೈ ತಿಳಿಸಿದ್ದಾರೆ.
ದಕ್ಷಿಣ ವಲಯ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ಮಾಹಿತಿ:
ಮುತ್ತಪ್ಪ ರೈ ಮೃತಪಟ್ಟಿದ್ದಾರೆ ಎಂಬ ವದಂತಿ ಹರಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಐಸಿಯುನಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಿಗ್ಗೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಲಾಗುವುದು. ಈ ಕುರಿತು ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ದೊರೆತಿದೆ ಎಂದು ದಕ್ಷಿಣ ವಲಯ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ಮಾಹಿತಿ ನೀಡಿದ್ದಾರೆ.