ರಾಮನಗರ : ಪ್ರಧಾನಿಗಳು ಕಳೆದ ಆರುವರೆ ವರ್ಷದಿಂದ ನಾವು ಎಲ್ಲದರಲ್ಲೂ ಮುಂದು ಅಂತಾರೆ. ಆದರೆ, ನಾವು ಎಲ್ಲಾ ಸೂಚ್ಯಾಂಕಗಳಲ್ಲಿಯೂ ಹಿಂದೆ ಇದ್ದೇವೆ. ಬಡತನ, ಅಪೌಷ್ಟಿಕತೆ, ನಿರುದ್ಯೋಗ, ಆರ್ಥಿಕ ಸಮಸ್ಯೆಗಳಿದ್ದರೂ, ಭಾವನಾತ್ಮಕ ವಿಚಾರಗಳಿಂದ ಜನರನ್ನ ಕೆರಳಿಸುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನಪರಿಷತ್ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪ್ರವೀಣ್ ಪೀಟರ್ ಪರ ಮತಯಾಚನೆ ಮಾಡುವ ಸಲುವಾಗಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನತೆಯ ಹಿತ ಕಾಪಾಡುವಲ್ಲಿ ವಿಫಲವಾಗಿವೆ. ಕೊರೊನಾ ಸಂದರ್ಭದಲ್ಲಿಯೂ ಸರ್ಕಾರ ಸತ್ತಂತಿದೆ ಎಂದರು.
ಕೆಲವರು ನನಗೆ ರಾಜಕೀಯವಾಗಿ ಸ್ಲೋ ಪಾಯ್ಸನ್ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಏನು ಬೇಕಾದರೂ ಮಾತನಾಡಬಹುದು. ಅವರ ಪಕ್ಷ ಕಟ್ಟೋಕೆ, ಅವರ ಕಾರ್ಯಕರ್ತರನ್ನ ಹುರಿದುಂಬಿಸೋಕೆ ವೇದಿಕೆಯಲ್ಲಿ ಮಾತನಾಡಬಹುದು, ನಮ್ಮದೇನು ತಕರಾರಿಲ್ಲ. ನಾವು, ನಮ್ಮ ಪಕ್ಷ, ಕಾರ್ಯಕರ್ತರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಗಮನಹರಿಸುತ್ತೇವೆ. ಅವರ ವಿರುದ್ಧ ನಾವು ಮಾತನಾಡುವ ಅವಶ್ಯಕತೆ ಇಲ್ಲ ಎಂದರು.