ರಾಮನಗರ: ಕನಕಪುರದ ನಿವಾಸದಲ್ಲಿರುವ ಡಿಕೆ ಬ್ರದರ್ಸ್ ತಾಯಿ ಗೌರಮ್ಮ ಪ್ರತಿ ವರ್ಷದಂತೆ ಗೌರಿ ಪೂಜೆಗೆ ತನ್ನಿಬ್ಬರು ಮಕ್ಕಳು, ಮೊಮ್ಮಕ್ಕಳ ಜೊತೆಗೆ ಪೂಜೆ ಸಲ್ಲಿಸುತ್ತಿದ್ದರು. ಇದೇ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಅನುಪಸ್ಥಿತಿ ಜೊತೆಗೆ ಮಗ ದೆಹಲಿಯಲ್ಲಿ ಕಣ್ಣೀರಿಟ್ಟಿದ್ದನ್ನು ಟಿವಿಯಲ್ಲಿ ಕಂಡ ತಾಯಿ ಗೌರಮ್ಮ ಕೂಡ ಕಣ್ಣೀರಿಟ್ಟಿದ್ದಾರೆ.
ಡಿಕೆಶಿ ತಾಯಿ ಮಾತನಾಡಿ, ಹಬ್ಬಕ್ಕಾಗಿ ಪಿತೃಗಳ ಪೂಜೆಗೆ ಅವಕಾಶ ಕೊಡಬೇಕಿತ್ತು. ನನ್ನ ಮಗ ಯಾರದ್ದಾದರೂ ತಲೆ ಒಡೆದ್ದಿದ್ದರೆ ಅದನ್ನ ಪ್ರೂವ್ ಮಾಡಿ ತೋರಿಸಲಿ. ಅದು ಬಿಟ್ಟು ಈ ರೀತಿ ತೊಂದರೆ ಕೊಡಬಾರದು ಎಂದರು.
ಸುಮ್ಮನೆ ದುಡ್ಡು, ದುಡ್ಡು ಅಂದ್ರೆ, ಎಲ್ಲರತ್ರಾನೂ ದುಡ್ಡಿದೆ. ನಾವು ಇವತ್ತಿನ ಕಾಲಕ್ಕೆ ಶ್ರಿಮಂತರಾದವರಲ್ಲ. ನಮ್ಮ ಪೂರ್ವಿಕರು ಶ್ರೀಮಂತರಾಗಿದ್ದರು. ಇಬ್ಬಳಿಗೆ ಕೆಂಪೇಗೌಡ ಅಂತಾ ನಮ್ಮ ಮಾವನವರ ಹೆಸರು. ಅವರು ಇಬ್ಬಳಿಗೆಯಲ್ಲಿಯೇ ಚಿನ್ನ ಅಳೆದ್ದಿದ್ದರು ಎಂದ ಅವರು, ನನ್ನ ಮಗನಿಗೆ 7 - 8 ವರ್ಷವಿದ್ದಾಗಲೇ ನಮ್ಮ ಮನೆ ರೇಡ್ ಆಗಿತ್ತು. ಆಗ ಎಲ್ಲರೂ ಬಚಾವ್ ಆಗಿದ್ದೆವು. ಆದರೆ, ನಾವು ಯಾರಿಗೂ ಮೋಸ ಮಾಡಿಲ್ಲ, ತಲೆ ಒಡೆದಿಲ್ಲ. ಕಂಡವರ ದುಡ್ಡು ತಿಂದಿಲ್ಲ. ನಾವು ಬೆಳೆದಿದ್ದನ್ನ ಜನ ಸಹಿಸುತ್ತಿಲ್ಲ ಅಷ್ಟೇ. ಅಧಿಕಾರಿಗಳಿಗೆ ಕರುಣೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಪಾರ್ಟಿಯವರು ಇದನ್ನೆಲ್ಲ ಮಾಡ್ತಿದ್ದಾರೆ ಎಂದು ಆರೋಪಿಸಿದ ಗೌರಮ್ಮ, ನನ್ನ ಮಗ ಮುಂದೆ ಬರ್ತಾನೆ. ಯಾರಿಗೂ ಬಗ್ಗಲ್ಲ ಅಂತಾ ಹೀಗೆಲ್ಲ ಮಾಡಲಾಗುತ್ತಿದೆ. ದೇವರು ನನ್ನ ಮಗನಿಗೆ ಒಳ್ಳೆಯದನ್ನೇ ಮಾಡಲಿ. ನನ್ನ ಮೊಮ್ಮಗ ಆಕಾಶ್ ಕೆಂಪೇಗೌಡ ಬಂದು ಪೂಜೆ ಮಾಡ್ತಾನೆ. ಈ ಬಾರಿ ನನ್ನ ಮಗ ಬಂದಿಲ್ಲ ಅನ್ನೋ ನೋವು ನನಗಿದೆ. ಪ್ರತಿ ವರ್ಷ ತನ್ನ ಇಬ್ಬರೂ ಮಕ್ಕಳು ಜೊತೆಗೆ ಇರುತ್ತಿದ್ದರು ಎಂದು ನೋವು ತೋಡಿಕೊಂಡರು.