ರಾಮನಗರ: ಪ್ರತಿಪಕ್ಷಗಳ ಅಪಪ್ರಚಾರದಿಂದ ವಿಚಲಿತರಾಗಿಲ್ಲ, ಜೆಡಿಎಸ್‌ನ ಕಟ್ಟಾಳುಗಳಾದ ಬಿಡದಿ ಪುರಸಭೆಯ 15 ಮಂದಿ ಸದಸ್ಯರು ಒಟ್ಟಾಗಿದ್ದಾರೆ. ನನ್ನದು ಸೇರಿ 16 ಮತಗಳಾಗುತ್ತವೆ, ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಯಾರು ಅಧ್ಯಕ್ಷ ಹಾಗೂ ಉಪಾದ್ಯಕ್ಷರಾಗಬೇಕೆಂದು ಹಿರಿಯರ ಸಮ್ಮುಖದಲ್ಲಿ ತೀರ್ಮಾನಿಸುತ್ತೇವೆ ಎಂದು ಮಾಗಡಿ ಶಾಸಕ ಎ. ಮಂಜುನಾಥ್ ಹೇಳಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ನಿಸ್ವಾರ್ಥ ಸೇವೆಗೆ ಗೌರವ ಸೂಚಿಸುವ ಸಲುವಾಗಿ ಹಾಗೂ ಅವರ ಘನತೆಗೆ ಯಾವುದೇ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಪಕ್ಷದ ಸದಸ್ಯರೂ ಕೂಡ ನಮ್ಮೊಂದಿಗೆ ಕೈಜೋಡಿಸಬೇಕು ಎಂದರು. ಬಿಡದಿ ಪುರಸಭೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಪ್ರತಿಪಕ್ಷದ ಸದಸ್ಯರು ಜೆಡಿಎಸ್ ಜೊತೆ ಕೈ ಜೋಡಿಸಬೇಕು. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಕರ್ಮಭೂಮಿಯಲ್ಲಿ ಕೆಲವರು ಇಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಗ್ಗಟ್ಟು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಒಂದೆಡೆ ಸೇರಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಬಿಡದಿ ಪುರಸಭೆಯ ಉಳಿದ ಅವಧಿ ಹಾಗೂ ಮಾಗಡಿ ಪರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯನ್ನು ನವೆಂಬರ್ 10 ರೊಳಗೆ ನಡೆಸಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ನಾವೆಲ್ಲರೂ ತಯಾರಾಗಿದ್ದು, 23 ಸದಸ್ಯ ಬಲದ ಬಿಡದಿ ಪುರಸಭೆಯಲ್ಲಿ ಈಗಾಗಲೇ ಜೆಡಿಎಸ್ ನೊಂದಿಗೆ 15 ಸದಸ್ಯರು ಗುರುತಿಸಿಕೊಂಡಿದ್ದಾರೆ. ನಮ್ಮ ಒಗ್ಗಟ್ಟು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಬಿಡದಿ ಪುರಸಭೆ ವ್ಯಾಪ್ತಿಯ ಯುಜಿಡಿ ಕಾಮಗಾರಿಗಾಗಿ 90 ಕೋಟಿ ರೂ., ಕುಡಿಯುವ ನೀರಿಗೆ 74 ಕೋಟಿ, ಎಸ್ ಎಫ್ಸಿ ಯಲ್ಲಿ ವಿಶೇಷ ಅನುದಾನ ನೀಡಿದ್ದಾರೆ. ಪ್ರಸ್ತುತ ಬಿಜೆಪಿ ಸರ್ಕಾರ ಇದ್ದರೂ ಕ್ಷೇತ್ರದ ಅಭಿವೃದ್ಧಿಗೆ ಕೊರತೆಯಾಗದಂತೆ ಕುಮಾರಸ್ವಾಮಿಯವರು ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಡಿಕೆಯವರ ಗೌರವ ಹಾಗೂ ಪಕ್ಷದ ಘನತೆ ಉಳಿಸಲು ಪುರಸಭೆ ಚುನಾವಣೆಯಲ್ಲಿ ಸದಸ್ಯರು ಒಗ್ಗಟ್ಟಿನಿಂದ ಇದ್ದೇವೆ ಎಂದು ತಿಳಿಸಿದರು.
ರೇಷ್ಮೆ ಇಲಾಖೆ ಜಾಗವನ್ನು ಪುರಸಭೆಯ ಸುಸಜ್ಜಿತ ಕಟ್ಟಡ ಕಟ್ಟಲು ಸರ್ಕಾರ ಮುಂಜೂರು ಮಾಡಿದೆ. ಉತ್ತಮ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕ ಮಂಜುನಾಥ್ ಹೇಳಿದರು.