ರಾಮನಗರ : ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಮತ್ತೊಂದು ಸುತ್ತಿನ ಕ್ರೆಡಿಟ್ ವಾರ್ಗೆ ನೂತನ ಜಿಲ್ಲಾಸ್ಪತ್ರೆ ಸಜ್ಜಾಗಿದೆ. ಮೂರು ಪಕ್ಷದ ನಾಯಕರು ಒಂದೇ ವೇದಿಕೆಯಲ್ಲಿ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು. ನೂತನ ಆಸ್ಪತ್ರೆಯ ಕ್ರೆಡಿಟ್ಗಾಗಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಬೆಂಬಲಿಗರ ನಡುವೆ ಕ್ರೆಡಿಟ್ ಟಾಕ್ ಶುರುವಾಗಿದ್ದು, ಒಂದೇ ವೇದಿಕೆಯಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ಕುಮಾರಸ್ವಾಮಿ, ಸಂಸದ ಡಿ ಕೆ ಸುರೇಶ್, ಸಚಿವ ಡಾ ಅಶ್ವತ್ಥನಾರಾಯಣ್ ಹಾಗೂ ಡಾ ಕೆ ಸುಧಾಕರ್ ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್. ಡಿ ಕುಮಾರಸ್ವಾಮಿ, ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಮೂರು ಪಕ್ಷಗಳ ಕೊಡುಗೆ ಇದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನೇ ಘೋಷಣೆ ಮಾಡಿದ್ದೆ. ಬಳಿಕ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಭೂಮಿ ಪೂಜೆ ಮಾಡಲಾಗಿತ್ತು. ಈಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ಅನುದಾನ ನೀಡಿ ಕಾಮಗಾರಿ ಪೂರ್ಣ ಮಾಡಲಾಗಿದೆ. ಇದರ ಕ್ರೆಡಿಟ್ ಮೂರು ಪಕ್ಷಗಳಿಗೆ ಸೇರಲಿದೆ ಎಂದರು.
ಸಚಿವ ಡಾ ಅಶ್ವತ್ಥನಾರಾಯಣ್ ಹೇಳಿಕೆ : ರಾಮನಗರ ಬೆಂಗಳೂರಿಗೆ ಹತ್ತಿರವಿರುವ ಜಿಲ್ಲೆ. ಬೆಂಗಳೂರು ಹೊರತುಪಡಿಸಿ ಅಭಿವೃದ್ಧಿಗೆ ಒತ್ತು ಕೊಡಬೇಕಾದ ಜಿಲ್ಲೆಯಾಗಿದೆ. ಅವಕಾಶ ಇದ್ದು ಸಮೃದ್ಧಿ ಕಾಣಬೇಕಿರುವ ಈ ಜಿಲ್ಲೆಯಲ್ಲಿ ಆರೋಗ್ಯ ಸೇವೆ ಒದಗಿಸಬೇಕು. ಈ ಜಿಲ್ಲಾಸ್ಪತ್ರೆ ಹೇಗೆ ನಿರ್ಮಾಣ ಆಗಿದೆ ಅನ್ನುವುದನ್ನ ಎಲ್ಲರೂ ಹೇಳಿದ್ದಾರೆ. ಕೇವಲ ಆಸ್ಪತ್ರೆ ನಿರ್ಮಾಣವಾದರೆ ಸಾಲದು, ಗುಣಮಟ್ಟದ ವ್ಯವಸ್ಥೆ ಬೇಕು. ಹೀಗಾಗಿ ಗುಣಮಟ್ಟದ ಆಸ್ಪತ್ರೆ ನಿರ್ಮಾಣ ಮಾಡಿದ್ದೇವೆ ಎಂದು ಉಸ್ತುವಾರಿ ಸಚಿವ ಡಾ ಅಶ್ವತ್ಥ ನಾರಾಯಣ್ ತಿಳಿಸಿದರು.
ರಾಮನಗರದಲ್ಲಿ ನೂತನ ಜಿಲ್ಲಾಸ್ಪತ್ರೆಗೆ ಚಾಲನೆ ಕೊಟ್ಟು ಅವರು ಮಾತನಾಡಿದರು. ಈ ದಿನ ನೂತನ ಆಸ್ಪತ್ರೆಗೆ ಎಲ್ಲಾ ನಾಗರೀಕ ಬಂದುಗಳು ಆಸಕ್ತಿ ವಹಿಸಿ ಬಂದಿದ್ದೀರಿ. ಎಲ್ಲರೂ ಉತ್ಸಾಹದಿಂದ ಬಂದಿದ್ದೀರಿ. ಎಲ್ಲರಿಗೂ ಧನ್ಯವಾದಗಳು. ಡಿ. ಕೆ ಸುರೇಶ್ ಅವರು ಹೇಳಿದ್ರು, ಇದರ ಡಿಸೈನ್ ಮಾಡಿದ್ದು, ಜಮೀನು ನೀಡಿದ್ದು ನಾವು ಅಂತ. ಖಂಡಿತಾ ಅವರು ಹೇಳಿದ್ದು ನಿಜ ಎಂದರು.
ಜಿಲ್ಲಾಸ್ಪತ್ರೆ ಹಿಂದೆ ಕುಮಾರಸ್ವಾಮಿ ಅವರ ಕೊಡುಗೆ ಕೂಡಾ ಅಪಾರವಾಗಿದೆ. ನಾನು ಕೂಡಾ ವೈದ್ಯಕೀಯ ಹಿನ್ನೆಲೆಯಿಂದ ಬಂದಿರುವವನು. ಇತ್ತೀಚಿನ ಆಸ್ಪತ್ರೆಗಳ ವ್ಯವಸ್ಥೆ ಬದಲಾಗಿದೆ ಎಂದರು. ಆಸ್ಪತ್ರೆಗಳಿಗೆ ಹೈಟೆಕ್ ಸ್ಪರ್ಶ ಬೇಕಿದೆ. ಬೆಂಗಳೂರಿನ ಹೆಬ್ಬಾಗಿಲು ರಾಮನಗರವಾಗಿದೆ. ಈ ರಾಮನಗರ ಆರೋಗ್ಯ ನಗರವಾಗಬೇಕು ಎಂದು ಸಚಿವ ಅಶ್ವತ್ಥನಾರಾಯಣ್ ಇದೇ ವೇಳೆ ತಿಳಿಸಿದರು.
ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕಿದೆ: ಈ ದಿನ ಬಹಳ ಸಂತೋಷದ ದಿನ. ಕ್ಷೇತ್ರದ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕಿದೆ. ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಏರಿಸಲಾಗಿದ್ದು, ಈಗ ಬೆಂಗಳೂರಿಗರು ಹೋಗಬೇಕಿಲ್ಲ. ಈಗ ಎಲ್ಲಾ ಸೇವೆ ಇಲ್ಲಿಯೇ ಸಿಗ್ತಾ ಇರೋದು ಸಂತೋಷವಾಗಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.
ರಾಜೀವ್ ಗಾಂಧಿ ಯೂನಿವರ್ಸಿಟಿ ಇನ್ನೂ ಆಗಿಲ್ಲ. ಇದಕ್ಕೆ ಸಾಕಷ್ಟು ಸಮಸ್ಯೆ ಇದೆ. ಹಿಂದೆ ಕುಮಾರಸ್ವಾಮಿ ಎಂಪಿ ಆಗಿದ್ದಾಗ ಈ ಆಸ್ಪತ್ರೆ ಮಾಡಬೇಕು ಅಂತ ಮಾಡಿದ್ರು. ಜಾಗದ ಸಮಸ್ಯೆ ಆಗಿತ್ತು. ಈಗ ಎಲ್ಲಾ ಪಕ್ಷದ ಎಲ್ಲರಿಗೂ ಅವರದೇ ಆದ ಕೊಡುಗೆ ಇದೆ. ಇದರಲ್ಲಿ ರಾಜಕೀಯ ಏನಿಲ್ಲ. ಉದ್ಘಾಟನೆಯಲ್ಲಿ ನಾನು ಭಾಗವಹಿಸಿಲ್ಲ ಅನ್ನೋ ಬೇಸರ ಏನಿಲ್ಲ. ನಮ್ಮ ಜನರಿಗೆ ಅನುಕೂಲ ಆಗಲಿದೆ ಎಂಬುದೇ ಸಂತೋಷವಾಗಿದೆ ಎಂದು
ಅನಿತಾ ಕುಮಾರಸ್ವಾಮಿ ತಿಳಿಸಿದರು.
ಇದನ್ನೂ ಓದಿ : ಚಿಕ್ಕಮಗಳೂರು: ಸಿದ್ದರಾಮಯ್ಯ ವಿರುದ್ಧ ಹೆಚ್. ಡಿ. ಕುಮಾರಸ್ವಾಮಿ ವಾಗ್ದಾಳಿ..