ರಾಮನಗರ: "ಜಿಲ್ಲೆಯ ಹೆಸರು ಬದಲಾವಣೆ, ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡುವ ವಿಚಾರ ನನಗೆ ಗೊತ್ತೇ ಇಲ್ಲ" ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ ಹೇಳಿದರು. ಜಿಲ್ಲೆಯ ಮಾಗಡಿಯಲ್ಲಿ ಮಾತನಾಡಿದ ಅವರು, "ರಾಮನಗರ ಜಿಲ್ಲೆಗೆ ಮರುನಾಮಕರಣ ಮಾಡುವ ವಿಚಾರ ನನಗೆ ಗೊತ್ತಿಲ್ಲ. ನನಗೆ ವೈಯಕ್ತಿಕವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಿಕ್ಕಿಲ್ಲ, ಅವರೊಂದಿಗೆ ಈ ವಿಚಾರವಾಗಿ ಚರ್ಚೆ ಮಾಡಿಲ್ಲ. ಹೆಸರು ಬದಲಾವಣೆ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ, ನಷ್ಟ ಆಗಲ್ಲ. ಜೊತೆಗೆ ಜಿಲ್ಲೆಗೆ ಹೆಚ್ಚಿನ ಅನುದಾನ, ಮೂಲ ಸೌಕರ್ಯಗಳು ಸಿಗಬೇಕು. ಆ ಉದ್ದೇಶದಿಂದ ಬದಲಾವಣೆ ಆದರೆ ತೊಂದರೆ ಇಲ್ಲ" ಎಂದರು.
ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ ಮಾತನಾಡಿ, "ಮರುನಾಮಕರಣ ಮಾಡಿದರೆ ಏನಾಗುತ್ತೆ?, ಉಪವಾಸ ಮಾಡೋದು, ಬಿಡೋದು ಅವರಿಗೆ ಬಿಟ್ಟಿದ್ದು. ಸುಮ್ಮನೆ ಏನೇನೋ ಮಾತನಾಡುತ್ತಾರೆ. ಬೆಂಗಳೂರು ಹೆಸರು ನಮ್ಮ ಜಿಲ್ಲೆಗೆ ಬಂದರೆ ಒಳ್ಳೆಯದೇ ಅಲ್ಲವೇ" ಎಂದು ಇದೇ ವೇಳೆ ತಿಳಿಸಿದರು.
ಜನತಾ ದರ್ಶನ ಮಾಡಿದ ಸಚಿವರು: ಮಾಗಡಿ ಪಟ್ಟಣದ ಶಿವಕುಮಾರ ಸ್ವಾಮಿಗಳ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿದರು. ಸಾರ್ವಜನಿಕರ ಸಮಸ್ಯೆ ಆಲಿಸಿದ ಸಚಿವರು ಸ್ಥಳದಲ್ಲೇ ಅದಕ್ಕೆ ಪರಿಹಾರ ಸೂಚಿಸಿದರು. ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ್, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಸಿಇಒ ದಿಗ್ವಿಜಯ ಬೋಡ್ಕೆ ಇದ್ದರು.
ರಾಮನಗರಕ್ಕೆ ಮರುನಾಮಕರಣ ಮಾಡುವ ಬಗ್ಗೆ ಡಿಕೆಶಿ ಹೇಳಿದ್ದೇನು?: ಇತ್ತೀಚಿಗೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಚನ್ನಪಟ್ಟಣ, "ರಾಮನಗರ, ಕನಕಪುರ, ಮಾಗಡಿ ತಾಲೂಕುಗಳನ್ನು ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ" ಎಂದು ತಿಳಿಸಿದ್ದರು.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿದ್ದ ಅವರು, "ಹಿಂದೆ ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ರಾಮನಗರ ತಾಲೂಕು ಸೇರಿಸಿ ಹೊಸದಾಗಿ ರಾಮನಗರ ಜಿಲ್ಲೆ ಮಾಡಲಾಗಿತ್ತು. ರಾಮನಗರ ಜಿಲ್ಲಾ ಕೇಂದ್ರವಾಯಿತು. ಈಗ ಬೆಂಗಳೂರು ನಗರದ ಅಂತಾರಾಷ್ಟ್ರೀಯ ಖ್ಯಾತಿ, ಸಾರ್ವಭೌಮತೆ ಮತ್ತು ಘನತೆ ರಾಮನಗರ, ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ತಾಲೂಕುಗಳಿಗೆ ಲಭ್ಯ ಆಗಬೇಕು ಎಂಬುದು ಜನರ ಆಶಯ ಮತ್ತು ನನ್ನ ಚಿಂತನೆಯೂ ಕೂಡ" ಎಂದು ಹೇಳಿದ್ದರು.
"ಹೀಗಾಗಿ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರ ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿ ಹಾಗೂ ರಾಮನಗರವನ್ನು ಇದರ ಜಿಲ್ಲಾ ಕೇಂದ್ರವಾಗಿ ಇರಿಸಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಜನರ ಅಭಿಪ್ರಾಯವನ್ನು ಕೂಡ ಸಂಗ್ರಹಿಸಲಾಗುತ್ತಿದೆ" ಎಂದು ಡಿಕೆಶಿ ತಿಳಿಸಿದ್ದರು.
ಇದನ್ನೂ ಓದಿ: ಕುಮಾರಸ್ವಾಮಿ ಸವಾಲು ಸ್ವೀಕರಿಸುತ್ತೇನೆ, ಅಧಿವೇಶನದಲ್ಲಿ ಚರ್ಚೆಗೆ ಸಿದ್ಧ: ಡಿ.ಕೆ.ಶಿವಕುಮಾರ್