ರಾಮನಗರ: ಮೇಕೆದಾಟು ಯೋಜನೆ ರೂಪಿಸೋಕೆ ಡಬಲ್ ಇಂಜಿನ್ ಸರ್ಕಾರ ಬೇಕಿಲ್ಲ. ಕಾಂಗ್ರೆಸ್ ಪಕ್ಷದಿಂದಲೇ ಮೇಕೆದಾಟು ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ರಾಮನಗರ ಜಿಲ್ಲೆ ಕನಕಪುರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಅವರು ಮಾತನಾಡುತ್ತಿದ್ದರು. ಮೇಕೆದಾಟು ಯೋಜನೆ ಆರಂಭಿಸುವಂತೆ ನಮ್ಮ ಪಕ್ಷದಿಂದ ಪಾದಯಾತ್ರೆ ನಡೆಸಿದ್ದೇವೆ. ಕೇಂದ್ರ ಹಾಗೂ ರಾಜ್ಯದ ಡಬಲ್ ಇಂಜಿನ್ ಬಿಜೆಪಿ ಸರ್ಕಾರಕ್ಕೆ ಯೋಜನೆ ಮಾಡುವ ಯೋಚನೆ ಇಲ್ಲ. ಈ ಯೋಜನೆ ಆರಂಭ ಆಗೋದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ. ಅದುವರೆಗೂ ಯೋಜನೆ ಬಗ್ಗೆ ಯಾರು ಕೂಡಾ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಇದಲ್ಲದೆ ರಾಜ್ಯದ ಬಿಜೆಪಿ ಸಂಸದರು ಕೂಡ ಕೇಂದ್ರದ ಬಿಜೆಪಿ ಸರ್ಕಾರದ ನಡಾವಳಿಗೆ ಬೇಸತ್ತಿದ್ದಾರೆ. ಏಳೆಂಟು ಮಂದಿ ಸಂಸದರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೆಸರು ಸಮೇತ ಬಿಜೆಪಿ ಸಂಸದರನ್ನು ಹೇಳಬಹುದು. ಶೀಘ್ರದಲ್ಲೇ ಮುಂದಿನ ದಿನಗಳಲ್ಲಿ ಎಲ್ಲವೂ ನಿಮಗೆ ತಿಳಿಯಲಿದೆ ಎಂದು ಡಿಕೆಶಿ ಹೇಳಿದರು.
ಸಾಮೂಹಿಕ ನಾಯಕತ್ವ : ನಮ್ಮದು ಸಾಮೂಹಿಕ ನಾಯಕತ್ವ. ಮುಂದಿನ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಹೋರಾಡುತ್ತಿದ್ದೇವೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ. ಇದಕ್ಕೆ ನಮಗೆ ಬಿಜೆಪಿ ಹಾಗೂ ಜೆಡಿಎಸ್ ಶಾಸಕರೇ ಬೆಂಬಲವಾಗಿ ನಿಲ್ಲಲಿದ್ದಾರೆ. ಸಾಕಷ್ಟು ಮಂದಿ ನಮ್ಮ ಪಕ್ಷ ಸೇರಲು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಏನೇನು ಬದಲಾವಣೆ ಆಗಲಿದೆ ಅನ್ನೋದನ್ನು ನೀವೇ ನೋಡಲಿದ್ದೀರಿ ಎಂದು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿ ತಿಳಿಸಿದರು.
ಸಚಿವ ಅಶ್ವತ್ಥನಾರಾಯಣ್ ಹೇಳಿಕೆಗೆ ಪ್ರತಿಕ್ತಿಯಿಸಲು ನಕಾರ.. ಇದೇ ವೇಳೆ ಸಚಿವ ಡಾ ಅಶ್ವತ್ಥನಾರಾಯಣ್ ಅವರು ಡಿ ಕೆ ಶಿವಕುಮಾರಗ್ ಸಿಡಿ ಮಾಡಲು ಫೇಮಸ್ ಎಂಬ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಡಿಕೆಶಿ ಹಾಗೆಯೇ ಹೊರಟರು.
ಕೇಂದ್ರ ಸಚಿವರನ್ನು ಭೇಟಿಯಾಗಿದ್ದ ಸಿಎಂ ಬೊಮ್ಮಾಯಿ.. ಕಳೆದ ವರ್ಷ ಜೂನ್ನಲ್ಲಿ ಮೇಕೆದಾಟು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಪತ್ರ ಬರೆದಿದ್ದರು. ಬಳಿಕ ನವದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದರು. ಅಲ್ಲದೆ, ಆದಷ್ಟು ಬೇಗ ಈ ವಿವಾದವನ್ನು ಇತ್ಯರ್ಥಪಡಿಸುವಂತೆ ಒತ್ತಾಯಿಸಿದ್ದರು.
ಈ ವೇಳೆ ಮಾತನಾಡಿದ್ದ ಸಿಎಂ ಬೊಮ್ಮಾಯಿ ಅವರು ತಮಿಳುನಾಡು ಮುಖ್ಯಮಂತ್ರಿ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಆದರೆ, ಕಾವೇರಿ ನದಿ ನೀರು ಪ್ರಾಧಿಕಾರಕ್ಕೆ ಮೇಕೆದಾಟು ಯೋಜನೆ ಡಿಪಿಆರ್ ಈಗಾಗಲೇ ಶಿಫಾರಸು ಆಗಿ 15 ಸಭೆಗಳು ಆಗಿವೆ. ಪ್ರಾಧಿಕಾರಕ್ಕೆ ಇರುವ ಅಧಿಕಾರದ ವ್ಯಾಪ್ತಿಯಲ್ಲಿ ಮತ್ತೊಂದು ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಈ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ಕೇಂದ್ರ ಸಚಿವರಲ್ಲಿ ಒತ್ತಡ ಹಾಕಿದ್ದೇನೆ ಎಂದಿದ್ದರು.
ಇದನ್ನೂ ಓದಿ : ಜನಪ್ರಿಯ ಬಜೆಟ್ಗಾಗಿ ಸಿಎಂ ಬೊಮ್ಮಾಯಿ ಸಿದ್ಧತೆ; ಹಣ ಹೊಂದಿಸಲು ರಾಜಸ್ವಗಳ ಮೇಲೆ ಕಣ್ಣು