ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿ ಗ್ರಾಮದಲ್ಲಿ ವಿಭಿನ್ನವಾಗಿ ಶಿವರಾತ್ರಿ ಹಬ್ಬವನ್ನ ಆಚರಿಸಲಾಯಿತು. ಈ ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನದ ಬಳಿ ಭಕ್ತರೆಲ್ಲರೂ ಸೇರಿ ಕುರಿ, ಕೋಳಿ ಬಲಿಕೊಟ್ಟು ಅಲ್ಲಿಯೇ ಪ್ರಸಾದವನ್ನ ತಯಾರು ಮಾಡುತ್ತಾರೆ.
ನೂರಾರು ಕೋಳಿ, ಕುರಿಯ ಮಾಂಸದ ಅಡುಗೆ: ಕೋಳಿ, ಕುರಿಯ ಮಾಂಸದ ಅಡುಗೆ ಮಾಡಿ, ದೇವರಿಗೆ ಪ್ರಸಾದ ಸಮರ್ಪಣೆ ಮಾಡಲಾಗುತ್ತದೆ. ನಂತರ ದೇವಸ್ಥಾನದ ಮುಂಭಾಗ ಕುಳಿತು ಭಕ್ತರು ಪ್ರಸಾದ ಸೇವಿಸುತ್ತಾರೆ. ಸುಮಾರು ನೂರಾರು ಕೋಳಿಗಳನ್ನ ಈ ಹಬ್ಬದಲ್ಲಿ ಬಲಿ ಕೊಡಲಾಗುತ್ತದೆ. ಎರಡರಿಂದ ಮೂರು ಸಾವಿರ ಭಕ್ತರು ಒಟ್ಟಿಗೆ ಕುಳಿತು ಮಾಂಸದ ಪ್ರಸಾದವನ್ನ ಸೇವಿಸುತ್ತಾರೆ.
ಇದನ್ನೂ ಓದಿ: ಶ್ರಮಿಕ ಮಹಿಳೆಯರ ಸ್ವಾಭಿಮಾನಿ ಸಂಕೇತ ಈ ಚರಕ
ಗೌರಿ ಹಬ್ಬದ ಸೋಮವಾರದಂದೂ ಮಾಂಸದೂಟ: ಅಂದಹಾಗೆ ಮಂಗಾಡಹಳ್ಳಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಈ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಪ್ರತಿವರ್ಷ ಭಕ್ತರು ದೇವಸ್ಥಾನಕ್ಕೆ ಬಂದು ಹರಕೆ ಮಾಡಿಕೊಳ್ಳುತ್ತಾರೆ. ತಮ್ಮ ಇಷ್ಟಾರ್ಥಗಳು ನೆರೆವೇರಿದ ಬಳಿಕ ಈ ಹಬ್ಬದ ದಿನದಂದು ತಮ್ಮ ಹರಕೆ ತೀರಿಸುತ್ತಾರೆ. ಕೇವಲ ಶಿವರಾತ್ರಿ ದಿನದಂದು ಮಾತ್ರ ಅಲ್ಲ. ಗೌರಿಹಬ್ಬ ಸೋಮವಾರ ಬಂದ್ರೆ ಅಂದು ಸಹ ಮಾಂಸದೂಟವನ್ನ ಮಾಡುತ್ತಾರೆ.
ಒಟ್ಟಾರೆ ಶಿವಭಕ್ತಿ ಸ್ಮರಣೆ ಜೊತೆಗೆ ಈ ಗ್ರಾಮದಲ್ಲಿನ ಭಕ್ತರು ಬಾಡೂಟ ಸವಿಯುವ ರೂಢಿಯನ್ನ ಹಿಂದಿನಿಂದಲೂ ಕೂಡ ಮಾಡಿಕೊಂಡು ಬಂದಿದ್ದಾರೆ.