ರಾಮನಗರ: ಆಪರೇಷನ್ ಕಮಲ ಮುಂದುವರಿದಿದೆ ಎಂದು ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎ. ಮಂಜುನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ಇನ್ನೂ ನಿಂತಿಲ್ಲ, ಬಿಜೆಪಿಗೆ ಬರುವಂತೆ ನನಗೂ ಕೂಡ ಆಮಿಷ ಒಡ್ಡಿದ್ದರು ಎಂದು ಬಿಜೆಪಿ ನಾಯಕರ ವಿರುದ್ಧ ಗಂಬೀರ ಆರೋಪ ಮಾಡಿದ್ದಾರೆ.
ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ಡಿಸಿಎಂ ಅಶ್ವಥ್ ನಾರಾಯಣ್, ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಬಂದು ನಿಮ್ಮನ್ನು ಸಚಿವರನ್ನಾಗಿ ಮಾಡುತ್ತೇವೆ, ಹಣ ಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದರು. ಆದರೆ, ನಾನು ಬಿಜೆಪಿ ನೀಡಿದ ಆಹ್ವಾನವನ್ನು ತಿರಸ್ಕರಿಸಿದ್ದೇನೆ ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರಿಗೆ ಪ್ರತಿಯೊಂದು ವಿಚಾರವನ್ನು ತಿಳಿಸಿದ್ದು, ಆಮಿಷಗಳಿಗೆ ನಾನು ಮಣಿಯುವ ಪ್ರಶ್ನೆಯೇ ಇಲ್ಲ, ಹಾಗಾಗಿ ನಾನು ಬಿಜೆಪಿ ಸೇರುವ ಪ್ರಮೇಯವೇ ಬರುವುದಿಲ್ಲ, ಜೆಡಿಎಸ್ ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ ಎಂದರು.