ರಾಮನಗರ: ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದೆ. ಅನಾಮಿಕನೊಬ್ಬನಿಂದ ಬಂದಿರುವ ಪತ್ರ ಇದಾಗಿದೆ. ಬಂಡಾಯ ಸಾಹಿತಿಯಾಗಿ ಗುರುತಿಸಿಕೊಂಡಿರುವ ಸಾಹಿತಿ ಬಂಜಗೆರೆ ಜಯಪ್ರಕಾಶ್ ಹಾರೋಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಜೀವ ಬೆದರಿಕೆ ಪತ್ರ ಸಿಕ್ಕಿದ ಹಿನ್ನೆಲೆಯಲ್ಲಿ ಹಾರೋಹಳ್ಳಿಯಲ್ಲಿರುವ ಬಂಜಗೆರೆ ಮನೆಗೆ ಪೊಲೀಸರು ಭೇಟಿ ವಿಚಾರಣೆ ನಡೆಸುತ್ತಿದ್ದಾರೆ.
ಜೀವ ಬೆದರಿಗೆ ಪತ್ರದಲ್ಲಿ ಏನಿದೆ?: ಪತ್ರದ ಮೇಲ್ಭಾಗದಲ್ಲಿ ಮೂರು ಕಡೆಗಳಲ್ಲಿ ಶ್ರೀ ಎಂದು ಬರೆಯಲಾಗಿದೆ. ಆ ನಂತರ ಬಂಜಗೆರೆ ಜಯಪ್ರಕಾಶ ಅವರಿಗೆ ಎಂದು ಬರೆಯಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಕಂಪನ ಆಡಳಿತ ಪ್ರಾರಂಭ. ಹಿಂದೂ ಸಜ್ಜನರಿಗೆ ಇದು ಸಂಕಷ್ಟದ ಸರ್ಕಾರ. ನಿಮ್ಮಂತಹವರಿಗೆ, ದುರ್ಜನ ದೇಶದ್ರೋಹಿಗಳಿಗೆ, ಮತಾಂದ, ಮುಸ್ಲಿಂ, ಮತಾಂತರಿ ಕ್ರೈಸ್ತರಿಗೆ ಪ್ರಿಯ ಸರ್ಕಾರ. ಉರಿಯಿರಿ ಮಕ್ಕಳ ಉರಿಯಿರಿ. ನಿಮ್ಮ ಜೀವ ಎಂಬ ಅಜ್ಞಾನದ ದೀಪ ಆರುವುದು ನಿಶ್ಚಿತ ನಿಶ್ಚಿತ. ಬಂಜಗೆರೆ ಜಯಪ್ರಕಾಶ ನಿಶ್ಚಿತ ನಿನ್ನ ಅಂತ್ಯ ಎಂದು ಬರೆದು ಸಹಿಷ್ಟು ಹಿಂದು ಎಂದು ಬರೆಯಲಾಗಿದೆ. ಕೊನೆಗೆ ಜೈ ಹಿಂದು ಜೈ ಹಿಂದು ರಾಷ್ಟ್ರ ಎಂದು 2 ಬಾರಿ ಬರೆಯಲಾಗಿದೆ.
ಇದನ್ನೂ ಓದಿ: ಸಾಹಿತಿ ಕುಂ. ವೀ, ಡಿಕೆಶಿ, ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ 61 ಮಂದಿಗೆ ಜೀವ ಬೆದರಿಕೆ ಪತ್ರ!
KAS ಅಧಿಕಾರಿಗೆ ಸಹೋದರನಿಂದಲೇ ಜೀವ ಬೆದರಿಕೆ: ಇತ್ತೀಚೆಗೆ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಮಹಿಳಾ ಅಧಿಕಾರಿಗೆ ಸ್ವಂತ ಸಹೋದರನೇ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧಿಕಾರಿ ಡಾ. ಮೈತ್ರಿ ನೀಡಿರುವ ದೂರಿನನ್ವಯ ಅವರ ಸಹೋದರ ಡಾ.ಸಂಜಯ್ ವಿರುದ್ಧ ಹಲ್ಲೆ, ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಹಿಳಾ KAS ಅಧಿಕಾರಿಗೆ ಸಹೋದರನಿಂದಲೇ ಜೀವ ಬೆದರಿಕೆ: ಪ್ರಕರಣ ದಾಖಲು
ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್. ಅವರ ಮೊಬೈಲ್ಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಈ ಸಂಬಂಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಎಪ್ರಿಲ್ 20ರ ಮಧ್ಯಾಹ್ನ 2.28ರ ಸುಮಾರಿಗೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ತಮ್ಮ ಕಚೇರಿಯಲ್ಲಿ ಚುನಾವಣಾ ವೀಕ್ಷಕರೊಂದಿಗೆ ಸಭೆಯನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಮೊಬೈಲ್ ಗೆ 7353998242 ಮೊಬೈಲ್ ಸಂಖ್ಯೆಯಿಂದ ಕರೆ ಬಂದಿತ್ತು. ಜಿಲ್ಲಾಧಿಕಾರಿಯವರು ಕರೆ ಸ್ವೀಕರಿಸಿದ್ದು, ಈ ವೇಳೆ ಅಪರಿಚಿತ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ : ದೂರು ದಾಖಲು