ರಾಮನಗರ : ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸುವ ಮೊದಲು ರಾಜಕೀಯ ವಿರೋಧಿಗಳು ಜಿಲ್ಲೆ ಹಾಗೂ ರಾಜ್ಯಕ್ಕೆ ಅವರು ನೀಡಿರುವ ಕೊಡುಗೆಯನ್ನು ನೆನಪಿಸಿಕೊಳ್ಳಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿರುಗೇಟು ನೀಡಿದರು.
ನಗರದದಲ್ಲಿ ಬಿಡಿಸಿಸಿ ಬ್ಯಾಂಕ್ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಕುಮಾರಸ್ವಾಮಿ ಅತ್ತೆ ಮನೆಗೆ ಅಳಿಯ ಬಂದಂತೆ ಬರುತ್ತಾರೆ ಎಂದು ಆರೋಪಿಸುವ ಮೊದಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಗಂಗಾಧರ್, ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನೊಂದ ಜನತೆಗೆ ಏನು ನೆರವು ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.
ಕಳೆದ ಎರಡು ವರ್ಷಗಳಿಂದ ಮೈತ್ರಿ ಧರ್ಮ ಪಾಲನೆ ಮಾಡುತ್ತಿದ್ದ ಸ್ಥಳೀಯ ಕಾಂಗ್ರೆಸ್ ನಾಯಕರು ಇದೀಗ ಏಕಾಏಕಿ ಕುಮಾರಸ್ವಾಮಿ ವಿರುದ್ಧ ಮಾತನಾಡುತ್ತಿರುವ ಮರ್ಮವೇನು ಎಂಬುದು ತಮಗೆ ತಿಳಿಯುತ್ತಿಲ್ಲ. ಕೇವಲ ವಿರೋಧಕ್ಕಾಗಿ ಟೀಕೆ ಮಾಡುವ ಬದಲು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕೈಜೋಡಿಸುವುದು ಒಳಿತು.
ಲಾಕ್ಡೌನ್ ಸಂಕಷ್ಟದ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಚನ್ನಪಟ್ಟಣ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಅಗತ್ಯ ದಿನಸಿ ಕಿಟ್ ವಿತರಿಸಲಾಗಿದೆ. ಸುಮಾರು 48 ದಿನಗಳ ಎರಡೂ ತಾಲೂಕುಗಳ ಸಾವಿರಾರು ನಿರಾಶ್ರಿತರಿಗೆ ಹೆಚ್ಡಿಕೆ ಜನತಾ ದಾಸೋಹ ಕಾರ್ಯಕ್ರಮದಡಿಯಲ್ಲಿ ಉಪಹಾರ ಹಾಗೂ ಮಧ್ಯಾಹ್ನದ ಊಟ ನೀಡಲಾಗಿದೆ. ಟೀಕಿಸುವ ಜನರಿಗೆ ಇವೆಲ್ಲಾ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.