ರಾಮನಗರ: ಮಾಗಡಿಯಲ್ಲಿ ಮನುಷ್ಯರ ಮೇಲೆ ಚಿರತೆ ದಾಳಿ ಮುಂದುವರೆದಿದೆ. ಹಸು ಮೇಯಿಸುತ್ತಿದ್ದ ಮಹಿಳೆಯ ಮೇಲೆ ದಾಳಿ ಮಾಡಿರುವ ಚಿರತೆ ಗಂಭೀರವಾಗಿ ಗಾಯಗೊಳಿಸಿದೆ.
ವಿವರ:
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಪಣಕನಕಲ್ಲು ಗ್ರಾಮದಲ್ಲಿ ಮಹದೇವಮ್ಮ ಹೊಲದ ಪಕ್ಕದಲ್ಲೇ ಹಸು ಮೇಯಿಸುತ್ತಿದ್ದರು. ಈ ವೇಳೆ ಚಿರತೆ ಏಕಾಏಕಿ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಎದೆಗುಂದದೆ ಮಹದೇವಮ್ಮ ಹೋರಾಡಿದ್ದು, ಮುಖ ಹಾಗು ಕುತ್ತಿಗೆಯ ಭಾಗಕ್ಕೆ ಗಾಯವಾಗಿದೆ. ಸದ್ಯ ಅವರು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಉಜ್ಜನಹಳ್ಳಿ ಗ್ರಾಮದಲ್ಲೂ ಕೂಡ ಚಿರತೆಯೊಂದು ದಾಳಿ ನಡೆಸಿದೆ. ಗ್ರಾಮದ ಶಿವಣ್ಣಗೌಡರ ಮಗ ರವೀಶ್ ತೋಟದ ಮನೆಯಲ್ಲಿ ಕಟ್ಟಿಹಾಕಿದ್ದ ಸೀಮೆ ಹಸುವಿನ ಕರುವಿನ ಮೇಲೆರಗಿ ಬಲಿ ತೆಗೆದುಕೊಂಡಿದೆ. ಹೀಗಾಗಿ, ಗ್ರಾಮಸ್ಥರು ಭಯಭೀತರಾಗಿದ್ದು, ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.