ರಾಮನಗರ : ರೇಷ್ಮೆನಗರಿ ರಾಮನಗರ ಜಿಲ್ಲೆಯ ಪ್ರಭಾವಿ ನಾಯಕ ಬಿಜೆಪಿ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸಚಿವ ಸಿ ಪಿ ಯೋಗೇಶ್ವರ್ ಅವರ ತವರು ಕ್ಷೇತ್ರ ಚನ್ನಪಟ್ಟಣದಲ್ಲಿ ಮುಖಭಂಗವಾಗಿದೆ. ನಗರಸಭೆ ಚುನಾವಣೆ ಹಿನ್ನೆಲೆ ವಾರ್ಡ್‌ಗಳಲ್ಲಿ ಸ್ಪರ್ಧೆ ಮಾಡಲು ಅಭ್ಯರ್ಥಿಗಳಿಲ್ಲದೆ ಸಿಪಿವೈಗೆ ಮುಜುಗರ ಉಂಟಾಗಿದೆ.
ಚನ್ನಪಟ್ಟಣ ನಗರಸಭೆಯಲ್ಲಿ ಒಟ್ಟು 31 ವಾರ್ಡ್‌ಗಳಿವೆ. ಈ ಪೈಕಿ ಬಿಜೆಪಿ ಕೇವಲ 23 ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಉಳಿದ 8 ವಾರ್ಡ್‌ಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಉಳಿದಂತೆ ಜೆಡಿಎಸ್ 31 ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷ 30 ವಾರ್ಡ್‌ಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ.
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ ಹಾಗೂ ಆಡಳಿತರೂಢ ಸರ್ಕಾರ ಕೂಡ ಇದೆ. ಸರ್ಕಾರದಲ್ಲಿ ಸಿಪಿವೈ ಸಚಿವರಾಗಿದ್ರೂ 8 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸದಿರುವುದಕ್ಕೆ ಜೆಡಿಎಸ್ ನಾಯಕರು ಚುನಾವಣೆಗೂ ಮುನ್ನವೆ ಯೋಗೇಶ್ವರ್ ಸೋಲಿನ ಭವಿಷ್ಯ ನುಡಿದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ, ಹಾಲಿ ಚನ್ನಪಟ್ಟಣ ಶಾಸಕ ಹೆಚ್ ಡಿ ಕುಮಾರಸ್ವಾಮಿ ಎದುರು ಭಾರೀ ಅಂತರದಿಂದ ಸೋತಿದ್ದರೂ ಸಹ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಲಿ ಎಂಬ ದೂರಾಲೋಚನೆ, ಸಾಕಷ್ಟು ವಿರೋಧದ ನಡುವೆಯೂ ಬಿಜೆಪಿ ಹೈಕಮಾಂಡ್ ಸಿಪಿವೈಗೆ ಸಚಿವ ಸ್ಥಾನ ನೀಡಿತ್ತು.
ಆದ್ರೆ, ಚನ್ನಪಟ್ಟಣ ನಗರಸಭಾ ಚುನಾವಣೆಯಲ್ಲಿ ಬರೋಬ್ಬರಿ 8 ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನ ಕಣಕ್ಕಿಳಿಸದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅದ್ರಲ್ಲೂ 8 ಮುಸ್ಲಿಂ ಸಮುದಾಯದ ವಾರ್ಡ್‌ಗಳಲ್ಲೇ ಬಿಜೆಪಿ ಪಕ್ಷದ ಚಿಹ್ನೆಯಡಿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿಲ್ಲ. ಹಾಲಿ ಸಚಿವ ಸಿ ಪಿ ಯೋಗೇಶ್ವರ್ ಕ್ಷೇತ್ರದಲ್ಲಿ ಇದ್ರೂ ಕೂಡ ಪಕ್ಷಕ್ಕೆ ಹಿನ್ನಡೆಯಾದಂತಾಗಿದೆ.