ರಾಮನಗರ: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ಹುಟ್ಟೂರಾದ ಮಾಗಡಿ ತಾಲೂಕಿನ ವೀರಾಪುರ ಗ್ರಾಮ ಅಭಿವೃದ್ಧಿ ಕಾಣದೇ ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ.
ವೀರಾಪುರ ಗ್ರಾಮದಲ್ಲಿ 111 ಅಡಿ ಎತ್ತರದ ಪ್ರತಿಮೆ:
ಶ್ರೀಗಳು ಹುಟ್ಟಿ ಬೆಳೆದ ಮಾಗಡಿ ತಾಲೂಕಿನ ವೀರಾಪುರವನ್ನು ಪಾರಂಪರಿಕ ಹಾಗೂ ವಿಶ್ವ ದರ್ಜೆಯ ಸಾಂಸ್ಕೃತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಇದಕ್ಕಾಗಿ ಬಜೆಟ್‌ನಲ್ಲಿ 25 ಕೋಟಿ ರೂ. ಅನುದಾನವನ್ನೂ ತೆಗೆದಿಡಲಾಗಿತ್ತು. ಶ್ರೀಗಳು 111 ವರ್ಷ ಜೀವಿಸಿ ಸಮಾಜದ ಒಳಿತಿಗಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದರು. ಶ್ರೀಗಳ ಸವಿನೆನಪಿಗಾಗಿ ವೀರಾಪುರ ಸಮೀಪದ ಗುಡ್ಡದಲ್ಲಿ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಕಳೆದ ವರ್ಷ ನವೆಂಬರ್ 8 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಶಂಕುಸ್ಥಾಪನೆ ನೆರವೇರಿಸಿದ್ದರು.
ಶಿವಗಂಗೆ ಬೆಟ್ಟಕ್ಕೆ ಅಭಿಮುಖವಾಗಿ ನಿರ್ಮಾಣವಾಗಲಿರುವ ಶ್ರೀಗಳ ಪ್ರತಿಮೆಯ ಬಂಡೆಯಾಕಾರದ ತಳಹದಿಯೇ 30 ಅಡಿ ಎತ್ತರ ಇರಲಿದೆ. ಅದರ ಮೇಲೆ ಊರುಗೋಲು ಹಿಡಿದುಕೊಂಡಿರುವ ಶ್ರೀಗಳ ಬೃಹತ್ ಪ್ರತಿಮೆ ನಿರ್ಮಾಣವಾಗಲಿದೆ. ಇದಲ್ಲದೆ ಸಭಾ ಭವನ, ವಸ್ತು ಸಂಗ್ರಹಾಲಯ, ಧ್ಯಾನ ಕೊಠಡಿ ನಿರ್ಮಾಣಕ್ಕೆ ವಿನ್ಯಾಸ ಮಾಡಲಾಗಿದೆ. ಪಿಎಸ್‌ಎಪಿ ಎನ್ನುವ ಕಂಪನಿ ಪ್ರತಿಮೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದೆ.
ಪ್ರತಿಮೆ ಕಾಮಗಾರಿಗೆ ಚಾಲನೆ ನೀಡಿ ವರ್ಷವೇ ಕಳೆದಿದ್ದು ಅರಣ್ಯ ಇಲಾಖೆಗೆ ಸೇರಿದ ಜಾಗ ಇದಾಗಿದೆ. ಈ ಕುರಿತು ದಾಖಲೆಗಳ ಹಸ್ತಾಂತರ ನಡೆಯುತ್ತಲೇ ಇದ್ದು, ಈ ಹಿನ್ನೆಲೆ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಪ್ರತಿಮೆ ಹೊರತುಪಡಿಸಿ ಒಟ್ಟು 17 ಎಕರೆ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರ ಆಸಕ್ತಿ ತೋರಿದೆ. ಧ್ಯಾನ ಕೇಂದ್ರ, ಸಭಾಂಗಣ, ಮ್ಯೂಸಿಯಂ, ಉದ್ಯಾನ, ದಾಸೋಹ ಭವನ, ಯಾತ್ರಿಗಳಿಗಾಗಿ ಭವನ ಮೊದಲಾದವುಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿಕೊಂಡಿದೆ.
ಒಟ್ಟಿನಲ್ಲಿ ತ್ರಿವಿಧ ದಾಸೋಹಿ ಶ್ರೀಗಳ ಹುಟ್ಟೂರು ವೀರಾಪುರ ಅಭಿವೃದ್ಧಿ ಕಾಣದೇ ಕೆಲ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಮತ್ತೊಂದೆಡೆ ಶ್ರೀಗಳ 111 ಅಡಿ ಪ್ರತಿಮೆ ನಿರ್ಮಾಣ ಮಾಡುವುದರಲ್ಲಿ ಕೂಡ ವಿಳಂಬ ಮಾಡಲಾಗುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಅದಷ್ಟು ಬೇಗ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ.