ರಾಮನಗರ: ರಾಜ್ಯದ ಹಿತಕ್ಕಾಗಿ ನಡೆಯುತ್ತಿರುವ ನೀರಿಗಾಗಿ ನಡಿಗೆ, ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆಯಲ್ಲಿ ಎಲ್ಲ ಸ್ನೇಹಿತರು, ಕಾರ್ಯಕರ್ತರು, ಎಲ್ಲ ವರ್ಗದ ಜನ ಭಾಗವಹಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕನಕಪುರದ ಮಾದಪ್ಪನದೊಡ್ಡಿ ವಿಶ್ರಾಂತಿ ತಾಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ನನ್ನ ಮೇಲೆ ಹಾಗೂ ಪಕ್ಷದ ಮೇಲೆ ದೊಡ್ಡ ಸಂಚು ರೂಪಿಸುತ್ತಿದೆ. ಏನಾದರೂ ಮಾಡಿ ಪಾದಯಾತ್ರೆ ನಿಲ್ಲಿಸಲು ಯತ್ನಿಸುತ್ತಿದೆ. ಅದೇ ಅವರ ದೊಡ್ಡ ಕಾರ್ಯಕ್ರಮವಾಗಿದೆ. ಜಿಲ್ಲಾಧಿಕಾರಿಗೆ ಕೋವಿಡ್ ಪಾಸಿಟಿವ್ ಇದೆಯಂತೆ, ಅವರು ಮುಖ್ಯಮಂತ್ರಿಗಳು ಹಾಗೂ ಸಚಿವರ ಪಕ್ಕ ಕೂತಿದ್ದರು. ಅವರಿಗೆ ಪಾಸಿಟಿವ್ ಆಗಿಲ್ಲವೇ? ನಿನ್ನೆ ರಾತ್ರಿ ನನ್ನ ಬಳಿಗೆ ಎಡಿಓ ಕಳುಹಿಸಿ ಸ್ಯಾಂಪಲ್ ಕಲೆಹಾಕಲು ಮುಂದಾದರು. ನಮ್ಮ ಮನೆಯಲ್ಲೇ ಡಜನ್ ವೈದ್ಯರಿದ್ದಾರೆ. ಅರ್ಧ ಡಜನ್ ವೈದ್ಯಕೀಯ ಕಾಲೇಜು ಮಾಲೀಕರಿದ್ದಾರೆ. ನನಗೆ ಯಾವುದೇ ಸೋಂಕಿನ ಲಕ್ಷಣಗಳಿಲ್ಲ, ಹೀಗಾಗಿ ಯಾವುದೇ ಪರೀಕ್ಷೆ ಅಗತ್ಯವಿಲ್ಲ ಎಂದು ಕಳುಹಿಸಿದೆ ಎಂದರು.
ವಿಮಾನ ನಿಲ್ದಾಣದಲ್ಲಿ ಬಂದವರನ್ನೆಲ್ಲಾ ಹಿಡಿದು ಸೋಂಕು ತಗುಲಿದೆ ಎಂದು ಹೇಳುತ್ತಿದ್ದಾರೆ. ಇದರಲ್ಲಿ ದೊಡ್ಡ ಷಡ್ಯಂತ್ರ ನಡೆಯುತ್ತಿದ್ದು, ಪಾಸಿಟಿವ್ ಸಂಖ್ಯೆ ಹೆಚ್ಚಳ ಬಿಜೆಪಿ ತಂತ್ರವಾಗಿದೆ. ಜನರ ಮೇಲೆ ಬಿಜೆಪಿ ಕೋವಿಡ್, ಬಿಜೆಪಿ ಲಾಕ್ ಡೌನ್, ಬಿಜೆಪಿ ಕರ್ಫ್ಯೂ ಹೇರಲಾಗಿದೆ. ಕಲೆಕ್ಷನ್ ಕಡಿಮೆ ಆಗಿರಬೇಕು, ಹೀಗಾಗಿ ಸೋಂಕು ಇಲ್ಲದಿದ್ದರೂ ಇವರು ಜನರಿಗೆ ಸೋಂಕು ಭರಿಸುತ್ತಿದ್ದಾರೆ. ಸೊಂಕು ಸಂಖ್ಯೆ ಹೆಚ್ಚಳ ವಿಚಾರವಾಗಿ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ನಿನ್ನೆ ನನಗೆ ಪರೀಕ್ಷೆ ನಡೆಸಲು ಕಳುಹಿಸಿದ್ದ ಅಧಿಕಾರಿಗೂ ಪಾಸಿಟಿವ್ ಎಂದು ಹೇಳುತ್ತಿದ್ದಾರೆ. ಇದು ಎಷ್ಟು ನಿಜವೋ ಗೊತ್ತಿಲ್ಲ. ನಾನು ಪ್ರಾಥಮಿಕ ಸಂಪರ್ಕಿತ ಎನ್ನುತ್ತಿದ್ದಾರೆ. ಆತನನ್ನು ನನ್ನ ಬಳಿ ಕಳುಹಿಸಿದ್ದು ಯಾರು? ಯಾಕೆ ಕಳುಹಿಸಿದರು? ಎಂದು ಪ್ರಶ್ನಿಸಿದರು.
ಈ ವಿದ್ಯೆಯನ್ನು ಎಲ್ಲಿ ಕಲಿತಿರಿ? ಬಸವರಾಜ ಬೊಮ್ಮಾಯಿ ಅವರಿಗೆ ಈ ವಿದ್ಯೆ ಇದೆ ಎಂದು ನಾನು ನಂಬುವುದಿಲ್ಲ. ಆರೋಗ್ಯ ಸಚಿವರು ಅಥವಾ ಗೃಹಸಚಿವರಿಗೆ ಈ ವಿದ್ಯೆ ಗೊತ್ತಿರಬಹುದು. ಆರೋಗ್ಯ ಸಚಿವರು ಆಕ್ಸಿಜನ್ ನಿಂದ ಸತ್ತವರನ್ನೇ ಸತ್ತಿಲ್ಲ ಎಂದ ಗಿರಾಕಿ ಅವರು. ಡಿಹೆಚ್ಓ ಅವರೆಲ್ಲ ಅವರ ವ್ಯಾಪ್ತಿಯಲ್ಲೇ ಬರುತ್ತಾರೆ. ಕೆಲ ದಿನಗಳ ಹಿಂದೆ ಗೃಹ ಸಚಿವರು ತಮ್ಮ ಊರಿನಲ್ಲಿ ಜಾತ್ರೆ ಮಾಡಿದ್ದಾರೆ. ಅವರ ವಿರುದ್ಧ ಯಾಕೆ ಪ್ರಕರಣ ದಾಖಲಾಗಿಲ್ಲ? ಬಿಜೆಪಿ ನಾಯಕ ಗುತ್ತೆದಾರ್ ಅವರು ಸಾವಿರಾರು ಜನರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡಿದ್ದಾರೆ. ಆದರೂ ಪ್ರಕರಣ ಯಾಕೆ ದಾಖಲಾಗಿಲ್ಲ? ರಾಜಕೀಯ ಕಾರ್ಯದರ್ಶಿಯಾಗಿದ್ದ ರೇಣುಕಾಚಾರ್ಯ ಅವರು ನಿಯಮ ಉಲ್ಲಂಘಿಸಿದ್ದಾರೆ.
ನಿನ್ನೆ 127 ತಾಲೂಕುಗಳಿಂದ ನಮಗೆ ಕರ್ಫ್ಯೂ ನಿಯಮ ಉಲ್ಲಂಘನೆ ಫೋಟೋ, ವಿಡಿಯೋಗಳು ಬಂದಿವೆ. ಎಲ್ಲಿಯೂ ನಿಯಮ ಪಾಲನೆ ಆಗಿಲ್ಲ. ಎಲ್ಲೆಡೆ ಓಡಾಟ ಮಾಡಲಾಗಿದೆ. ಇವರ್ಯಾರ ಮೇಲೂ ಕೇಸ್ ಹಾಕಿಲ್ಲ ಯಾಕೆ? ಸಾತನೂರಿನಲ್ಲಿ 30 ಜನರ ಮೇಲೆ ಕೇಸ್ ಹಾಕಿದ್ದಾರಂತೆ. ವೇದಿಕೆ ಮೇಲೆ ಕೇವಲ 30 ಜನ ಮಾತ್ರವೇ ಇದದ್ದು, ಇನ್ನಷ್ಟು ಜನರ ವಿವರಗಳನ್ನು ನಾನು ನೀಡುತ್ತೇನೆ. ಸಾವಿರಾರು ಜನ ಇದ್ದರಲ್ಲ ಅವರ ಮೇಲೆ ಯಾಕೆ ಕೇಸ್ ದಾಖಲಿಸಿಲ್ಲ? ಎಂದು ಪ್ರಶ್ನಿಸಿದರು.
ಎಲ್ಲ ಕಡೆ ಬಿಜೆಪಿ ನಾಯಕರು ಸಭೆ ಕಾರ್ಯಕ್ರಮ ಮಾಡಿದ್ದಾರೆ. ಅವರ ಮೇಲೆ ಯಾಕೆ ಕೇಸ್ ಹಾಕಿಲ್ಲ? ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದ ವಿಚಾರವಾಗಿಯೂ ಪ್ರಕರಣ ದಾಖಲಿಸಿಲ್ಲ ಯಾಕೆ? ನಾವು ಸುಮ್ಮನೆ ಕೂರುತ್ತೇವೆ ಎಂದು ಭಾವಿಸಿದ್ದೀರಾ? ಈ ವಿಚಾರವಾಗಿ ಕಾನೂನು ಹೋರಾಟ ನಡೆಸುವಂತೆ ನಮ್ಮ ಪಕ್ಷದ ಕಾನೂನು ಘಟಕಕ್ಕೆ ಸೂಚನೆ ನೀಡುತ್ತೇನೆ. ಇದು ರಾಜಕೀಯ ಹೋರಾಟ, ಅನ್ಯಾಯದ ವಿರುದ್ಧ ನಮ್ಮ ಹಕ್ಕಿಗಾಗಿ ಮಾಡುವ ಹೋರಾಟ.
ಈ ರಾಜ್ಯದಲ್ಲಿ ಎಲ್ಲರಿಗೂ ನ್ಯಾಯ ಒಂದೇ. ನಾನು ಏನೇ ಮಾತನಾಡಿದರೂ ಬೇರೆ ರೀತಿ ಬಿಂಬಿತವಾಗುತ್ತಿದೆ. ನಾನು ಹೇಳುವುದೊಂದು ತೋರಿಸುವುದೊಂದು. ಹೀಗಾಗಿ ಮುಂದಿನ ಕೆಲವು ದಿನ ನಾನು ಮೌನ ವಹಿಸುತ್ತೇನೆ. ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡುವುದಿಲ್ಲ. ಪಾದಯಾತ್ರೆ ವಿಚಾರವಾಗಿ ನಮ್ಮ ಶಾಸಕರು, ವಿರೋಧ ಪಕ್ಷದ ನಾಯಕರು ನಿಮಗೆ ಬೇಕಾದ ಮಾಹಿತಿ ನೀಡುತ್ತಾರೆ. ಅವರೇ ಪಕ್ಷದ ನಿಲುವು ನಿಮಗೆ ಹೇಳಲಿದ್ದಾರೆ ಎಂದು ವಿವರಿಸಿದರು.
ನಿಮಗೆ ಪಾಸಿಟಿವ್ ಬಂದಿದೆ ಎಂದು ಹೇಳಲು ಪರೀಕ್ಷೆಗೆ ಕಳುಹಿಸಿದ್ದಾರೆ ಎಂಬ ಪ್ರಶ್ನೆಗೆ, 'ನಿನ್ನೆ ಕಳುಹಿಸಿದ್ದ ಅಧಿಕಾರಿಗೆ ಪಾಸಿಟಿವ್ ಅಂತೆ. ಇವರು ನನ್ನನ್ನು ಏನು ಮಾಡಬೇಕು ಎಂದುಕೊಂಡಿದ್ದಾರೆ. ನನ್ನ ಸಂಕಲ್ಪ ಏನು ಎಂದು ಅವರಿಗೆ ಗೊತ್ತಿದೆ. ಆದರೂ ಇಂತಹ ನೀಚ ರಾಜಕಾರಣ ಯಾಕೆ ಮಾಡುತ್ತಿದ್ದಾರೆ? ನನಗೆ ಪಾಸಿಟಿವ್ ಬಂದು ಬಿದ್ದಿದ್ದೇನಾ? ಉಸಿರಾಟ ನಿಂತಿದೆಯಾ?' ಎಂದರು.
ನಾನು ಕೋವಿಡ್ ಪರೀಕ್ಷೆಗೆ ಹೋಗಿರಲಿಲ್ಲ ಎಂಬ ಅಧಿಕಾರಿ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, 'ಅವರು ನಿಮ್ಮ ಬಳಿ ಏನು ಹೇಳಿದ್ದಾರೋ ಗೊತ್ತಿಲ್ಲ, ನನ್ನ ಬಳಿ ಏನು ಹೇಳಿದ್ದಾರೆ ಅಂತಾ ನನಗೆ ಗೊತ್ತಿದೆ. ಅವರು ಹೇಳುವುದನ್ನು ಕೇಳಿಕೊಳ್ಳಿ, ನಾನು ಹೇಳುವುದನ್ನು ಕೇಳಿಕೊಳ್ಳಿ. ಅವರು ಸರ್ಕಾರಿ ಅಧಿಕಾರಿ, ಅವರು ಏನು ತಾನೆ ಮಾಡಲು ಸಾಧ್ಯ ಎಂದರು.
ಪಾಸಿಟಿವ್ ವರದಿ ನೀಡಲೇ ಬಂದಿದ್ದಾರೆ ಎಂದು ಹೇಗೆ ಹೇಳುತ್ತೀರಿ ಎಂಬ ಪ್ರಶ್ನೆಗೆ, 'ಸರ್ಕಾರದ ಆಡಳಿತದಲ್ಲಿ ಏನೇನಾಗುತ್ತಿದೆ ಎಂಬೆಲ್ಲ ಮಾಹಿತಿ ನಮಗೆ ಗೊತ್ತಿದೆ. ಅಲ್ಲಿರುವ ಮಂತ್ರಿಗಳು, ಅಧಿಕಾರಿಗಳು ನಮಗೆ ಮಾಹಿತಿ ನೀಡುತ್ತಿದ್ದಾರೆ. ನಿಮಗೆ ಮಾಹಿತಿ ಹೇಗೆ ಸಿಗುತ್ತದೋ, ಅದೇ ರೀತಿ ನಮಗೂ ಸಿಗುತ್ತದೆ.
ಕೋವಿಡ್ ಹೆಚ್ಚಾದರೆ ಕಾಂಗ್ರೆಸ್ ಹೊಣೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, 'ನಾವು ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸರ್, ಮಾಸ್ಕ್ ಬಳಸುತ್ತಿದ್ದ ಹಾಗೆ. ರಾಮನಗರ ಜಿಲ್ಲೆಯಲ್ಲಿ ಎಷ್ಟು ಜನ ಐಸಿಯು, ವೆಂಟಿಲೇಟರ್ ನಲ್ಲಿದ್ದಾರೆ. ರಿಯಾಲಿಟಿ ಚೆಕ್ ಮಾಡಿ. ಕನಕಪುರದ ಆಕ್ಸಿಜನ್ ಕೇಂದ್ರಕ್ಕೆ ಇನ್ನು ಚಾಲನೆ ನೀಡಿಲ್ಲ' ಎಂದರು.
ಪಾದಯಾತ್ರೆ ಮುಂದುವರಿದರೆ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಬರಲಿದೆ ಎಂಬ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿ, 'ಸರ್ಕಾರದವರು ರಾಜಕೀಯಕ್ಕಾಗಿ ಜನರನ್ನು ಸಾಯಿಸಲು ಹೊರಟಿದ್ದಾರೆ. ಅನೇಕ ವ್ಯಾಪಾರ ಬಂದ್ ಆಗಿದೆ. ಆ ಮೂಲಕ ಅವರ ಜೀವನವನ್ನೇ ಮುಗಿಸುತ್ತಿದ್ದಾರೆ. ಜೀವನ ಮುಗಿದ ಮೇಲೆ ಜೀವ ಇದ್ದು ಏನು ಸುಖ? ಅವರನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ' ಎಂದರು.
ನಿಮ್ಮ ಮೌನ ಪ್ರತಿಭಟನೆ ಯಾರ ವಿರುದ್ಧ ಎಂಬ ಪ್ರಶ್ನೆಗೆ, 'ಮಾಧ್ಯಮದ ವಿರುದ್ಧವಲ್ಲ. ಈ ಹೋರಾಟ ಯಾರ ವಿರುದ್ಧ ಮಾಡುತ್ತಿದ್ದೆವೋ ಅವರ ವಿರುದ್ಧ' ಎಂದರು. ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಟಿ.ಬಿ. ಜಯಚಂದ್ರ, ಉಮಾಶ್ರೀ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಧೃವನಾರಾಯಣ್, ಎಂಎಲ್ಎ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.