ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದು, ತಾಲೂಕು ಸಾಕಷ್ಟು ಅಭಿವೃದ್ಧಿಯಾಗಿದೆ. ಈ ಕುರಿತಂತೆ ಜನತೆಗೆ ತಿಳಿಸುವ ಹಾಗೂ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಚನ್ನಪಟ್ಟಣ ಕ್ಷೇತ್ರ ಪ್ರವಾಸ ಮಾಡುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಕ್ಷ ಸಂಘಟನೆ ವಿಚಾರವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ನಿಖಿಲ್ ಕುಮಾರಸ್ವಾಮಿ ನಗರಸಭೆ ಸದಸ್ಯರು ಹಾಗೂ ನಗರ ವ್ಯಾಪ್ತಿಯ ಜೆಡಿಎಸ್ ಮುಖಂಡರ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಕ್ಷೇತ್ರದ ಜೊತೆ ನನಗೆ ಸಾಕಷ್ಟು ವರ್ಷಗಳ ಒಡನಾಟವಿದೆ. ಆದರೆ, ಪಕ್ಷ ಸಂಘಟನೆ ವಿಚಾರವಾಗಿ ನಾನು ಇದೇ ಮೊದಲು ಇಲ್ಲಿಗೆ ಭೇಟಿ ನೀಡಿದ್ದೇನೆ. ಇನ್ನು ಚುನಾವಣಾ ಪ್ರಚಾರಕ್ಕೆ ಮಾಜಿ ಸಿಎಂ ಹೆಚ್‌ಡಿಕೆ ಅವರು ಬರದಿದ್ದರೂ ಗೆಲ್ಲಿಸಿರುವ ಇತಿಹಾಸ ಈ ತಾಲೂಕಿಗಿದೆ. ಇದು ನೀವುಗಳು ನಮ್ಮ ಕುಟುಂಬದ ಮೇಲೆ ಇಟ್ಟಿರುವ ಅಭಿಮಾನವನ್ನು ಎತ್ತಿ ತೋರಿಸುತ್ತದೆ ಎಂದರು.
ಇನ್ನು ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಮ್ಮ ಇಡೀ ಕುಟುಂಬ ಚಿರಋಣಿಯಾಗಿದ್ದು, ಸದಾ ನಿಮ್ಮೊಡನೆ ನಾವಿದ್ದೇವೆ ಎಂದು ಕಾರ್ಯಕರ್ತರಲ್ಲಿ ಧೈರ್ಯ ತುಂಬಿದರು. ಇನ್ನು ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ಪಕ್ಷ ಸಂಘಟಿಸುವ ಅವಶ್ಯಕತೆ ಇದೆ. ಈ ಕಾರಣದಿಂದ ನಿಮ್ಮ ಜೊತೆ ಇರುವ ಉದ್ದೇಶದಿಂದ ತಾಲೂಕಿನಲ್ಲಿ ಕಾಲ ಕಳೆಯುವ ನಿರ್ಧರಿಸಿದ್ದೇನೆ. ಇಲ್ಲಿನ ಜನರ ಕಷ್ಟಸುಖಗಳಲ್ಲಿ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದರು.
ಇಡೀ ಜಿಲ್ಲೆಯಲ್ಲಿ ಯುವಕರು ಸೇರಿದಂತೆ ಎಲ್ಲ ವರ್ಗದವರನ್ನು ಪಕ್ಷಕ್ಕೆ ಸೆಳೆಯುವ ಕೆಲಸವನ್ನು ಎಲ್ಲರೂ ಒಗ್ಗೂಡಿ ಮಾಡೋಣ. ಕೆಲವರು ಪಕ್ಷದಿಂದ ಹೊರ ಹೋಗಿರಬಹುದು. ಅವರಿಗೆ ಶುಭವಾಗಲಿ, ನೂರು ಜನ ಹೋದರೆ ಸಾವಿರ ಜನರನ್ನು ಪಕ್ಷಕ್ಕೆ ಕರೆತರೋಣ ಎಂದು ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ನಿಖಿಲ್ ಹುರುಪು ತುಂಬಿದರು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಇಂದಿನಿಂದ ಚನ್ನಪಟ್ಟಣ ಕ್ಷೇತ್ರ ಪ್ರವಾಸ ಕೈಗೊಂಡಿದ್ದಾರೆ.
ಇದನ್ನೂ ಓದಿ: ಅಮೆರಿಕದ ಕ್ರಮಕ್ಕೆ ಪ್ರತೀಕಾರ ಕೈಗೊಂಡ ರಷ್ಯಾ.. ಮಾಸ್ಕೋ ತೆಗೆದುಕೊಂಡ ಆ ನಿರ್ಧಾರವೇನು?