ರಾಮನಗರ: ನಿಧಿ ಶೋಧಕ್ಕಾಗಿ 'ನರಬಲಿ' ನೀಡುತ್ತಿದ್ದ ಕಥೆಗಳನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲೊಂದು ಪ್ರಕರಣ ವಿಭಿನ್ನ. ನಿಧಿ ಭೂಮಿಯಿಂದ ತನ್ನಿಂದ ತಾನೇ ಮೇಲೆ ಬರುತ್ತದೆ ಎಂದು ಹೇಳಿ ಪೂಜಾರಿಯೋರ್ವ ಮಹಿಳೆಯನ್ನು ನಗ್ನಗೊಳಿಸಿ ಪೂಜೆ ಸಲ್ಲಿಸಿದ್ದಾನೆ.
ಇಂತಹ ಅಮಾನವೀಯ ಘಟನೆಯನ್ನು ಕನಕಪುರ ತಾಲೂಕಿನ ಸಾತನೂರು ಪೊಲೀಸರು ಬೇಧಿಸಿದ್ದಾರೆ. ಈ ಪ್ರಕರಣ ಸಂಬಂಧ 6 ಮಂದಿಯನ್ನು ಬಂಧಿಸಿದ್ದು, ಮೌಢ್ಯ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಮಿಳುನಾಡು ಮೂಲದವರಾದ ಪಾರ್ಥ ಸಾರಥಿ, ನಾಗರಾಜು, ಶಶಿಕುಮಾರ್, ಲೋಕೇಶ್, ಮೋಹನ್, ಲಕ್ಷ್ಮಿ ನರಸಪ್ಪ ಎಂಬುವರನ್ನು ಬಂಧಿಸಲಾಗಿದ್ದು, ಪೂಜೆ ನೆಪದಲ್ಲಿ ಅಮಾಯಕಿ ಕೂಲಿ ಕಾರ್ಮಿಕ ಮಹಿಳೆಯನ್ನು ರಕ್ಷಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ವಿವರ:
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಸಮೀಪದ ಭೂಹಳ್ಳಿ ಗ್ರಾಮದಲ್ಲಿ ಈ ಹಿಂದೆ ವಾಸವಾಗಿದ್ದ ಶ್ರೀನಿವಾಸ್ ಎಂಬುವವರು ತಮ್ಮ ಮಡದಿಯ ತವರೂರು ಬನ್ನೂರಿನಲ್ಲೇ ವಾಸವಾಗಿದ್ದರು. ಈತನನ್ನು ಪುಸಲಾಯಿಸಿದ ಆರೋಪಿಗಳು, ನಿಮ್ಮ ಮನೆಯಲ್ಲಿ ನಿಧಿ ಇದೆ. ಅದನ್ನು ನಾವು ಪೂಜೆ ಮಾಡಿ ಹೊರ ತೆಗೆಯುತ್ತೇವೆ ಎಂದು ನಂಬಿಸಿದ್ದಾರೆ.
ಈ ಸಂಬಂಧ ಆಗಾಗ್ಗೆ ಭೂಹಳ್ಳಿಯಲ್ಲಿನ ಶ್ರೀನಿವಾಸ್ ಅವರ ಮನೆಯಲ್ಲಿ ರಾತ್ರೋರಾತ್ರಿ ಪೂಜೆಗಳನ್ನು ಸಲ್ಲಿಸಿದ್ದಾರೆ. ನಿನ್ನೆ (ಮಂಗಳವಾರ) ಇದೇ ಮನೆಯೊಳಗೆ ಪೂಜೆ ಸಲ್ಲಿಸುವಾಗ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ.
ಮಹಿಳೆ ಬೆತ್ತಲಾಗಬೇಕು ಎಂದಿದ್ದ ಪೂಜಾರಿ:
ಭೂಮಿಯೊಳಗಿನ ನಿಧಿ ತನ್ನಿಂದ ತಾನೇ ಮೇಲೆ ಬರುತ್ತದೆ. ಆದರೆ ಇದಕ್ಕಾಗಿ ಮನೆ ಮಾಲೀಕರಾದ ಶ್ರೀನಿವಾಸ್ ಅವರ ಪತ್ನಿ ಬೆತ್ತಲಾಗಬೇಕು. ನಾನು ಪೂಜೆ ಮಾಡುವಾಗ ಆಕೆ ಸಂಪೂರ್ಣ ಬೆತ್ತಲಾಗಿ ನಿಲ್ಲಬೇಕು ಎಂದು ಪೂಜಾರಿ ಶಶಿಕುಮಾರ್ ಹೇಳಿದ್ದ. ಆದರೆ, ಇದಕ್ಕೆ ಶ್ರೀನಿವಾಸ್ ಹೆಂಡತಿ ನಿರಾಕರಿಸಿದ್ದರು. ಹೀಗಾಗಿ ಪಾರ್ಥ ಸಾರಥಿ ಬಳಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ 50 ಸಾವಿರ ರೂ. ಹಣ ನೀಡುತ್ತೇನೆಂದು ಹೇಳಿ ಪೂಜೆ ವೇಳೆ ಬೆತ್ತಲಾಗಿ ನಿಲ್ಲಬೇಕು ಎಂದು ತಾಕೀತು ಮಾಡಿದ್ದರು.
ಪೂಜೆಯ ವೇಳೆ ಈಕೆಯೊಂದಿಗೆ ನಾಲ್ಕು ವರ್ಷದ ಹೆಣ್ಣು ಮಗು ಕೂಡ ಇತ್ತು. ರಾತ್ರಿ ಪೂಜೆ ಸಲ್ಲಿಸುತ್ತಿದ್ದ ವೇಳೆ, ಎಸ್ಪಿ ಎಸ್.ಗಿರೀಶ್ ನೇತೃತ್ವದಲ್ಲಿ ಸಾತನೂರು ಪೊಲೀಸರ ತಂಡ ದಾಳಿ ನಡೆಸಿದೆ. ಈ ವೇಳೆ ಮಹಿಳೆ ಬೆತ್ತಲಾಗಿಯೇ ಇದ್ದಳು. ಈ ಎಲ್ಲಾ ಘಟನೆ ಕಂಡ ಪೊಲೀಸರೇ ಅರೆಕ್ಷಣ ಬೆಚ್ಚಿ ಬಿದ್ದಿದ್ದಾರೆ.