ರಾಮನಗರ: ಕೆಲಸದ ಖಾಯಮಾತಿ, ಸುರಕ್ಷತಾ ಕವಚಗಳು, ನಿವೃತ್ತಿ ಸೇವಾ ಸೌಲಭ್ಯಗಳು ಮತ್ತು ಇತರೆ ಕಲ್ಯಾಣ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪೌರ ಕಾರ್ಮಿಕ ಹೊರಗುತ್ತಿಗೆ ನೌಕರರು ಆಹೋರಾತ್ರಿ ನಡೆಸುತ್ತಿರುವ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಅರೆಬೆತ್ತಲೆ ಮತ್ತು ತಮಟೆ ಚಳವಳಿ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಎಂಇಐ ಮಾಜಿ ಅಧ್ಯಕ್ಷ, ನಗರಸಭೆ ಸದಸ್ಯ ಕೆ.ಶೇಷಾದ್ರಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊರಗುತ್ತಿಗೆ ನೌಕರರು ನಗರ ಪಟ್ಟಣದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸರ್ಕಾರ ಅವರ ಕನಿಷ್ಟ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ಜಿಯಾವುಲ್ಲಾ ಮಾತನಾಡಿ, ನಾಲ್ಕು ದಿನಗಳ ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು. ನಗರಸಭೆ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಮಾತನಾಡಿ, ಹೊರಗುತ್ತಿಗೆ ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರ ಗಮನಹರಿಸದಿರುವುದು ನೋವಿನ ಸಂಗತಿ. ನಿಮ್ಮ ಬೇಡಿಕೆ ಈಡೇರುವವರೆಗೆ ನಿಮ್ಮ ಹೋರಾಟ ಜೊತೆ ನಾವು ನಿಲ್ಲುತ್ತೇವೆ ಎಂದರು.
ಇದನ್ನೂ ಓದಿ: ಇಂದಿನಿಂದ ರಾಜ್ಯಾದ್ಯಂತ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ: ತ್ಯಾಜ್ಯ ಸಮಸ್ಯೆ ಮತ್ತಷ್ಟು ಉಲ್ಬಣ