ರಾಮನಗರ: ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇಂದು 20 ವರ್ಷದ ಯುವತಿಗೆ ಕೊರೊನಾ ದೃಢವಾಗಿರುವ ಹಿನ್ನೆಲೆ ಚನ್ನಪಟ್ಟಣದ ಕುವೆಂಪುನಗರ 5ನೇ ಅಡ್ಡ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಇಂದು ಯುವತಿಯನ್ನ ಅಂಬುಲೆನ್ಸ್ ಮೂಲಕ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿದ್ದು, ಸೋಂಕಿತೆ ಮನೆಯಲ್ಲಿದ್ದ 7 ಮಂದಿಯನ್ನು ಕ್ವಾರಂಟೈನ್ ಸೆಂಟರ್ ಗೆ ಕಳುಹಿಸಲಾಗಿದೆ. ಅಲ್ಲದೆ, ನಗರಸಭೆ ವತಿಯಿಂದ ರಸ್ತೆಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಜೊತೆಗೆ ಅಧಿಕಾರಿಗಳು ಆಕೆಯೊಂದಿಗೆ ಮತ್ತು ಆಕೆಯ ಕುಟುಂಬದೊಂದಿಗೆ ಯಾರೆಲ್ಲಾ ಸಂಪರ್ಕಕ್ಕೆ ಬಂದಿದ್ದರು ಎಂಬುದರ ಪತ್ತೆ ಕಾರ್ಯದಲ್ಲಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಕನಕಪುರ ರಾಮನಗರ ಮಾಗಡಿ ತಾಲ್ಲೂಕುಗಳ ಲಾಕ್ ಡೌನ್ ಗೆ ಸ್ವಯಂ ತೀರ್ಮಾನ ಮಾಡಲಾಗಿತ್ತು. ಚನ್ನಪಟ್ಟಣ ಕೂಡ ಸ್ವಯಂ ಪ್ರೇರಿತವಾಗಿ ಲಾಕ್ಡೌನ್ ಮಾಡಿಕೊಳ್ಳಬೇಕೆಂಬ ಒತ್ತಾಯ ಕೂಡ ಕೇಳಿ ಬಂದಿತ್ತು. ಇಂದು ಕೂಡ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಸ್ಥಳೀಯವಾಗಿ ಸಾರ್ವಜನಿಕ ಹಿತದೃಷ್ಟಿ ಯಿಂದ ಜನತೆ ಸ್ವಯಂ ಕ್ವಾರಂಟೈನ್ ಆಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.