ರಾಮನಗರ: ಜಿಲ್ಲೆಯ ಗಡಿ ಭಾಗದಲ್ಲಿ ಕಾವೇರಿ ನದಿ ಹರಿವು ವ್ಯಾಪ್ತಿಯ ಮುತ್ತತ್ತಿಯಲ್ಲಿ ಮನೆ ಹಾಗೂ ಅಂಗಡಿ ಮುಂಗಟ್ಟುಗಳಿರುವ ಪ್ರದೇಶಗಳಲ್ಲಿ ನೀರು ನಗ್ಗಿದ್ದು, ಸಾಕಷ್ಟು ಪ್ರಮಾಣದ ನಷ್ಟ ಉಂಟುಮಾಡಿದೆ. ಸಂಗಮ ಹಾಗೂ ಮೇಕೆದಾಟುವಿನ ಹರಿವು ಹೆಚ್ಚಾಗಿದ್ದು, ಸುತ್ತಮುತ್ತಲ ಜನತೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಕೆಅರ್ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ಕಾವೇರಿ ಕೊಳ್ಳದ ಭಾಗವಾದ ಮುತ್ತತ್ತಿ ಗ್ರಾಮ ಜಲಾವೃತವಾಗಿದೆ. ಇನ್ನು ನೆರೆ ಸಂತ್ರಸ್ತರು ಹಾಗೂ ಹಾನಿಗೊಳಗಾದ, ಹಾನಿಗೊಳಗಾಗಬಹುದಾದ ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವ ಉದ್ದೇಶದಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೆರೆ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮುತ್ತತ್ತಿ ಹಾಗೂ ಕಾವೇರಿ ನದಿ ಪಾತ್ರದಲ್ಲಿರುವ ಕುಪ್ಪೇದೊಡ್ಡಿ, ಬೊಮ್ಮಸಂದ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂದಾಜು 50 ಸಾವಿರ ಮಂದಿ ಜೀವನ ಸಾಗಿಸುತ್ತಿದ್ದಾರೆ. ಒಂದು ವೇಳೆ ನದಿ ಪಾತ್ರದಲ್ಲಿ ನೀರಿನ ಹರಿವು ಇನ್ನೂ ಹೆಚ್ಚಾದರೆ ಇಷ್ಟು ಮಂದಿ ಸಹ ಆಪತ್ತಿಗೆ ಸಿಲುಕುತ್ತಾರೆ. ಆದ್ದರಿಂದ ಸುರಕ್ಷಿತ ಪ್ರದೇಶಗಳಿಗೆ ಕಳುಹಿಸುವ ಕಾರ್ಯ ಆರಂಭವಾಗಿದೆ. ಸಂಗಮ ಮುಳುಗಡೆ ಹಂತ ತಲುಪಿದರೆ, ಕುಪ್ಪೆದೊಡ್ಡಿ ಸಮೀಪ ಇರುವ ಅರಣ್ಯ ಇಲಾಖೆಯ ಐಬಿ ಹಾಗೂ ಕ್ಯಾಸಾಪುರದಲ್ಲಿನ ಚರ್ಚ್‌ಗೆ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ.
ಇದೆಲ್ಲವನ್ನು ವೀಕ್ಷಿಸಿ ನೆರೆಯಿಂದ ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರು ಪ್ರವಾಸ ಕೈಗೊಂಡಿದ್ದಾರೆ.