ರಾಮನಗರ: ಕುಟುಂಬ ರಾಜಕಾರಣ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಲೇ ಒಳಗೊಳಗೆ ಬೆಂಬಲ ನೀಡುತ್ತಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಅವರನ್ನು ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಯೋಗೇಶ್ವರ್ ಅಥವಾ ಎಂ.ರುದ್ರೇಶ್ ಅವರಿಗೆ ಟಿಕೆಟ್ ನೀಡಬೇಕೆಂದು ರಾಜ್ಯ ಬಿಜೆಪಿ ಸಭೆಯಲ್ಲಿ ತೀರ್ಮಾನಿಸಿ ಹೈಕಮಾಂಡ್ಗೆ ಪಟ್ಟಿ ಕಳುಹಿಸಲಾಗಿತ್ತು. ಆದ್ರೆ ದಿಢೀರ್ ಬೆಳವಣಿಗೆ ಎಂಬಂತೆ ನಿಶಾ ಯೋಗೇಶ್ವರ್ ಅವರ ಹೆಸರನ್ನು ಕೂಡ ಹೈಕಮಾಂಡ್ಗೆ ಕಳಿಸಲಾಗಿದೆ. ಈಗಾಗಲೇ ಎರಡು ಬಾರಿ ಡಿಕೆ ಬ್ರದರ್ಸ್ ಮತ್ತು ಹೆಚ್ಡಿಕೆ ಎದುರು ಮುಖಭಂಗ ಅನುಭವಿಸಿರುವ ಯೋಗೇಶ್ವರ್, ಈ ಬಾರಿ ಚುನಾವಣೆಯಲ್ಲಿ ಮೈತ್ರಿ ವಿರುದ್ಧ ಸೆಣಸಾಟ ನಡೆಸಲು ಕಷ್ಟಸಾಧ್ಯ ಎಂದರಿತು ಟೆಕೆಟ್ ಪಡೆಯಲು ಹಿಂದೇಟು ಹಾಕಿದ್ದರು. ಆದರೆ ಬಿಜೆಪಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಬೇಕೆಂದು ಹಠಕ್ಕೆ ಬಿದ್ದ ಪರಿಣಾಮ, ಯೋಗೇಶ್ವರ್ಗೆ ಹೆಗಲು ಕೊಡಬೇಕಾದ ಅನಿವಾರ್ಯತೆ ಬಂದಿದೆ ಎಂದು ಹೇಳಲಾಗ್ತಿದೆ.
ಕೈ ಕೊಟ್ಟ ಗಜಕೇಸರಿ ಯೋಗ :
ಈ ನಡುವೆ ಸಿ.ಪಿ.ಯೋಗೇಶ್ವರ್ ರಾಜಕಾರಣಲ್ಲಿ ಯಶಸ್ವಿ ನಾಯಕನಾಗಿ, ಸೋಲಿಲ್ಲದ ಸರದಾರನಾಗಿ ಪಕ್ಷ, ಚಿಹ್ನೆ, ಯಾವುದನ್ನು ಲೆಕ್ಕಿಸದೇ ಗೆಲುವಿನ ನಗೆ ಬೀರಿದ್ದರು. ಇದಕ್ಕೆಲ್ಲಾ ಅವರಿಗಿದ್ದ ಗಜಕೇಸರಿ ಯೋಗವೇ ಕಾರಣ ಎಂದು ಹೇಳಲಾಗುತ್ತಿತ್ತು. ಆದರೆ ಕಳೆದೆರಡು ಚುನಾವಣೆಗಳಿಂದ ಅವರ ಗಜಕೇಸರಿ ಯೋಗದ ಶಕ್ತಿ ಕಡಿಮೆಯಾಗಿದೆ ಎನ್ನುವ ಮಾತುಗಳಿಂದಲೇ ಯೋಗೇಶ್ವರ್ ಚುನಾವಣೆಗೆ ನಿಲ್ಲುವ ನಿಲುವು ಬದಲಿಸಿದ್ದರು. ಹಾಗಾಗಿ ತಮ್ಮ ಮಗಳಾದ ನಿಶಾ ಮುಖಾಂತರ ಮತ್ತೆ ಅಧಿಕಾರ ಪಡೆಯಲು ಪ್ರಯತ್ನ ಮುಂದುವರಿಸಿದ್ದಾರೆ ಎಂದು ಅವಲೋಕಿಸಲಾಗುತ್ತಿದೆ.
ಇನ್ನು ಮದಗಜಗಳೆಂದೇ ಕರೆಸಿಕೊಳ್ಳುವ ಡಿಕೆ ಬ್ರದರ್ಸ್ ಹಾಗೂ ಹೆಚ್ಡಿಕೆ ಒಟ್ಟಾಗಿರೋದು ಯೋಗೇಶ್ವರ್ಗೆ ನುಂಗಲಾರದ ತುಪ್ಪವಾಗಿದೆ. ಅವರನ್ನ ಮಣಿಸುವ ಪ್ರಯತ್ನಕ್ಕೆ ಮುಂದಾಗಿ ಮತ್ತೊಮ್ಮೆ ಎಡವಟ್ಟು ಮಾಡಿಕೊಳ್ಳಲೊಪ್ಪದ ಸಿಪಿವೈಗೆ ಮಗಳನ್ನ ನಿಲ್ಲಿಸಿ ಸಮಬಲದ ಪೈಪೋಟಿ ನೀಡಬಹುದೆಂಬ ಸಲಹೆ ಜ್ಯೋತಿಷಿಗಳಿಂದ ಸಿಕ್ಕಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಗುಸುಗುಸು ಆರಂಭವಾಗಿದೆ.